

ಹುಬ್ಬಳ್ಳಿ : ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಅಂಜುಮನ್ ರಾಯಲ್ ಫಂಕ್ಷನ್ ಹಾಲ್ನಲ್ಲಿ ಹುಬ್ಬಳ್ಳಿ ಶಹರ ವಲಯದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗೆ ತನಗೆ ಪಾಠ ಮಾಡಿದ ಶಿಕ್ಷಕರು ಸದಾ ನೆನಪಿನಲ್ಲಿ ಇರುತ್ತಾರೆ ಎಂದರು.
ಅತಿಥಿಯಾಗಿದ್ದ ಪರಿವರ್ತನ ಗುರುಕುಲದ ಚೇರ್ಮನ್ ಡಾ. ಅಶೋಕ ಕಾಮತ ಮಾತನಾಡಿ, ಶಿಕ್ಷಕ ವೃತ್ತಿಯು ಕೇವಲ ವೇತನಕ್ಕಾಗಿ ಮಾಡುವಂತಹ ಕರ್ತವ್ಯವಾಗಿರದೆ ಅದೊಂದು ಜವಾಬ್ದಾರಿ ಎಂಬುದನ್ನರಿತು ಶಿಕ್ಷಕರು ಕರ್ತವ್ಯ ನಿರ್ವಹಿಸಿದಾಗ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.
ಆಶೀರ್ವಚನ ನೀಡಿದ ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಶಿಕ್ಷಕನು ಜ್ಞಾನದ ಕಿರಣಗಳ ಮೂಲಕ ವಿದ್ಯಾರ್ಥಿಗಳ ಜೀವನ ಬೆಳಗುವ ಹಣತೆ ಇದ್ದಂತೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಪ್ಪಗೌಡ ಮಾತನಾಡಿ, ಹುಬ್ಬಳ್ಳಿ ಶಹರ ವಲಯದ ಶಿಕ್ಷಕರು ಮಕ್ಕಳ ಕಲಿಕೆಗೆ ತಾಲೂಕಿನಿಂದ ನೀಡಲ್ಪಟ್ಟ ಭಾಷೆ ಮತ್ತು ಗಣಿತ ಸಪ್ತಾಹವನ್ನು ಅತ್ಯುತ್ತಮವಾಗಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ, ಶಿಕ್ಷಕರ ಕಲಿಕೆಗೆ ಪ್ರಯತ್ನಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವುಮೆನ್ಸ್ ಕಾಲೇಜಿನ ಉಪನ್ಯಾಸಕಿ ದಾಕ್ಷಾಯಿಣಿ ಗೊಬ್ಬರಗುಂಪಿ ಉಪನ್ಯಾಸ ನೀಡಿದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಕ್ಷೇತ್ರ ಸಮನ್ವಯಾಧಿಕಾರಿ ಅನುಸೂಯ ಎಕ್ಕುಂಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಹ್ಲಾದ ಗೆಜ್ಜಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಜಂಗಳಿ, ಕಾರ್ಯದರ್ಶಿ ಅಮೀನುದ್ದೀನ್ ಶಿರಹಟ್ಟಿ ಹಾಗೂ ಇತರರು ಹಾಜರಿದ್ದರು.