

ಬ್ರಹ್ಮಾವರ: ಜೀವನದಲ್ಲಿ ತಂದೆ-ತಾಯಿಯ ಬಳಿಕ ಪ್ರಮುಖ ಪಾತ್ರ ಬೀರುವವರು ಶಿಕ್ಷಕರು ಎಂದು ಕುಂದಾಪುರ ಜನ ಸೇವಾ ಚಾರಿಟೆಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಐಶ್ವರ್ಯ ಶೆಟ್ಟಿ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಮಟಪಾಡಿಯ ವಿಜಯ ಬಾಲನಿಕೇತನ ನಿಲಯದ ಆರ್ಥಿಕ ಅಶಕ್ತ 65 ವಿದ್ಯಾರ್ಥಿಗಳಿಗೆ ಎರಡು ಜತೆ ಉಡುಪು ಜನ ಸೇವಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿದ್ದು, ಶಿಕ್ಷಣ ಮನುಷ್ಯನನ್ನು ಶ್ರೇಷ್ಠ ನಾಗರಿಕರನ್ನಾಗಿ ಮಾಡುತ್ತದೆ. ಒಬ್ಬ ಶಿಕ್ಷಕ ತನ್ನ ಜ್ಞಾನದ ಬೆಳಕಿನಿಂದ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಇರುವ ಕತ್ತಲೆ ಹೋಗಲಾಡಿಸಿ ಬೆಳಕಿನೆಡೆಗೆ ಕೊಂಡೊಯ್ಯುತ್ತಾನೆ ಎಂದರು.
ವಿಜಯ ಸೇವಾ ಪ್ರತಿಷ್ಠಾನ ಅಧ್ಯಕ್ಷ ಗಿರೀಶ್ಚಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಮಕ್ಕಳಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣ, ಹಸಿದ ಹೊಟ್ಟೆಗೆ ಆಹಾರ, ಮೈ ಮುಚ್ಚಿಕೊಳ್ಳಲು ಬಟ್ಟೆ ಇದನ್ನು ಮಕ್ಕಳಿಗೆ ನೀಡಿರುವುದು ಮಾದರಿ ಕಾರ್ಯ ಎಂದರು.
ಲಕ್ಷ್ಮೀನಾರಾಯಣ ಶೆಟ್ಟಿ ಇಂದ್ರಾಳಿ, ರೇಣುಕಾ ಸದಾಶಿವ ಶೆಟ್ಟಿ, ಅಕ್ಷತಾ ಸಾಯಿಪ್ರಸಾದ್ ಚೌಟ ಉಡುಪು ವಿತರಿಸಿದರು. ವಿಜಯ ನಿಕೇತನದ ಟ್ರಸ್ಟಿಗಳಾದ ಸೂರ್ಯನಾರಾಯಣ ಗಾಣಿಗ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ಅಶೋಕ ಕುಮಾರ್ ಶೆಟ್ಟಿ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕ ಜಯರಾಮ ನಾರಿ ವಂದಿಸಿದರು.