ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ

12_Alr_Teachers Day
Published on

ಆಲೂರು: ದೇಶ ಹಾಗೂ ನಾಡಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ವಿದ್ಯೆಯಿಲ್ಲದೆ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಹಾಸನ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನ ಬದುಕಿನಲ್ಲಿ ವಿದ್ಯೆ ಅತಿ ಮುಖ್ಯ. ಸದೃಢ ಸಮಾಜ ನಿರ್ಮಾಣ ಮಾಡುವುದರ ಜತೆಗೆ ಒಬ್ಬ ವ್ಯಕ್ತಿಯ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಮನುಷ್ಯ ಬದುಕಿನಲ್ಲಿ ಏನಾದರೂ ಸಾಧನೆ, ಯಶಸ್ಸು ಮತ್ತು ಆಡಳಿತ ನಡೆಸಲು ಶಿಕ್ಷಣ ಅತಿ ಮಹತ್ವದಾಗಿದೆ. ಮಕ್ಕಳ ಪ್ರಗತಿಗೆ ಮತ್ತು ಅವರ ಭವಿಷ್ಯವನ್ನು ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರು ದೇಶದ ಆಸ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

ನಿವೃತ್ತ ಶಿಕ್ಷಕ ಸೋಮಶೇಖರ ಮಾತನಾಡಿ, ಶಿಕ್ಷಕರು ಸಮಾಜ ನೀಡಿರುವ ಗುರುತರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ವಿದ್ಯಾರ್ಥಿಗಳ ಬದುಕನ್ನು ಹಸನಗೊಳಿಸಿ ಶಿಕ್ಷಕ ವೃತ್ತಿಗೆ ಗೌರವ ತರುವಂತಹ ಕೆಲಸವಾಗಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಪುಟ್ಟರಾಜು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನಕ್ಕೆ ಹೆಚ್ಚು ಮಹತ್ವವಿದೆ. ಶಿಕ್ಷಕರದ್ದು ಭವ್ಯ ಭಾರತಕ್ಕೆ ಉತ್ತಮ ಪ್ರಜೆಗಳನ್ನು ಕೊಡುವ ಮಹತ್ವದ ಪಾತ್ರ. ನಮ್ಮ ಜೀವನ ರೂಪುಗೊಳಿಸುವವರು ಶಿಕ್ಷಕರೇ ಆಗಿದ್ದು, ಪ್ರಗತಿಪರ ಮತ್ತು ಶಕ್ತಿಶಾಲಿ ದೇಶ ನಿರ್ಮಾಣಕ್ಕೆ ಶಿಕ್ಷಣವೇ ಅಸ್ತ್ರವಾಗಿದೆ ಎಂದ ಅವರು ತಮ್ಮ ವೃತ್ತಿ ಜೀವನದ ಸಾರ್ಥಕತೆಯನ್ನು ನೆನೆದು ಭಾವುಕರಾದರು.

ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ, ನಿವೃತ್ತ ಶಿಕ್ಷಕರಾದ ಸ್ವಾಮಿಗೌಡ, ಸೋಮಶೇಖರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ ರಾಘವೇಂದ್ರ, ಸಹ ಪ್ರಾಧ್ಯಾಪಕ ಕೆ.ಎನ್ ರಮೇಶ್, ಜೆ.ಜಿ ನಟರಾಜ, ಟಿ.ಕೆ ಶ್ರೀನಿವಾಸ, ಜಿ.ಪುರುಷೋತ್ತಮ, ಆರ್.ವಿ ಮನು, ರವಿಪ್ರಕಾಶ್, ವಿನುತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net