ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರ

21mdk3
Published on

ಮಡಿಕೇರಿ: ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ ಎಂದು ಭಾಗಮಂಡಲ ವಲಯ ಅರಣ್ಯ ಅಧಿಕಾರಿಗಳಾದ ಆರ್.ಎಫ್.ಓ. ಟಿ.ಎಂ.ರವೀಂದ್ರ ಅಭಿಪ್ರಾಯಪಟ್ಟರು.


ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ತಡಿಯಂಡಮೋಳ್ ಬೆಟ್ಟದ ಚಾರಣ ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅಭಿಪ್ರಾಯಪಟ್ಟರು.


ಪ್ಲಾಸ್ಟಿಕ್ ಬಳಕೆಯು ಪರಿಸರಕ್ಕೆ ಮಾರಕವಾಗಿದೆ. ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಮಾತ್ರವಲ್ಲದೆ ಜಾಗತಿಕ ತಾಪಮಾನ ಏರಿಕೆ, ವಾತಾವರಣ ಬದಲಾವಣೆಗೆ ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.


ಎನ್.ಎಸ್.ಎಸ್. ವಿದ್ಯಾರ್ಥಿಗಳ ತಂಡವು ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ನಡೆಸಿ ಅಲ್ಲಿದ್ದಂತಹ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಸ್ವಚ್ಛತೆ ನಡೆಸಿದರು. ಪ್ರವಾಸಿಗಳಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಅರ್ಜುನ್, ಉಪನ್ಯಾಸಕರಾದ ಶಾಂತಿಭೂಷಣ್, ಶಶಿಕಲಾ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ಸುರೇಶ್, ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.


ಬೆಟ್ಟಕ್ಕೆ ಚಾರಣ: ಚಾರಣ ಕಾರ್ಯಕ್ರಮಕ್ಕೆ ಭಾಗಮಂಡಲ ವಲಯದ ಅರಣ್ಯ ಉಪ ವಲಯ ಅಧಿಕಾರಿ ಸುರೇಶ್ ಚಾಲನೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಚಾರಣ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.


ಅರಣ್ಯ ಸಿಬ್ಬಂಧಿಗಳ ಮಾರ್ಗದರ್ಶನದಂತೆ ಚಾರಣ ನಡೆಯಿತು. ಬಳಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರಮಿಸಿ ತಡಿಯಂಡಮೋಳ್ ಬೆಟ್ಟದ ಎತ್ತರದ ಸ್ಥಳಕ್ಕೆ ತಲುಪಿದರು. ಈ ಸಂದರ್ಭ ಬೆಟ್ಟದ ಹಾದಿಯಲ್ಲಿ ಸಿಕ್ಕಿದ ಪ್ಲಾಸ್ಟಿಕ್, ಕಾಗದಗಳನ್ನು ಹಾಯುವುದರ ಮೂಲಕ ಸ್ವಚ್ಛತೆ ಮಾಡಿದರು.


ಸಮಾರೋಪ ಸಮಾರಂಭ: ಸಮಾರೋಪ ಕಾರ್ಯಕ್ರಮದಲ್ಲಿ ಭಾಗಮಂಡಲ ವಲಯದ ಅರಣ್ಯಾಧಿಕಾರಿಗಳಾದ ಆರ್.ಎಫ್.ಓ. ಟಿ. ಎಂ.ರವೀಂದ್ರರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪರಿಸರ ಎಂಬುವುದು ಒಂದು ಸಂಪನ್ಮೂಲವಾಗಿದೆ. ಮುಂದಿನ ಪೀಳಿಗೆಗೂ ಅದನ್ನು ರಕ್ಷಿಸುವ ಅಗತ್ಯವಿದೆ. ಹೀಗೆ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ ಎಂದರು.


ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಲು ಪಣ ತೊಡಬೇಕು. ಪರಿಸರವನ್ನು ರಕ್ಷಿಸಿದಲ್ಲಿ ಅದು ನಮ್ಮನ್ನು ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯು ಅತ್ಯಂತ ಕಳವಳಕಾರಿಯಾಗಿದ್ದು, ವಿದ್ಯಾರ್ಥಿಗಳು ಅದರ ನಿಯಂತ್ರಣ ಕ್ರಮಗಳನ್ನು ಅರಿಯಬೇಕೆಂದರು.


ಈ ಸಂದರ್ಭದಲ್ಲಿ ಶಿಕ್ಷಕರು, ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net