

ಮಡಿಕೇರಿ: ವೀರಶೈವ ಪರಂಪರೆಯನ್ನು ಪಸರಿಸುವಲ್ಲಿ ಶ್ರೀ ರೇಣುಕಾಚಾರ್ಯರ ಪಾತ್ರ ಮಹತ್ತರವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಶ್ರೀ ನಗರದ ಗಾಂಧಿ ಭವನದಲ್ಲಿ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರದ ಸನಾತನ ಸಂಸ್ಕೃತಿಯಲ್ಲಿ ದ್ವೈತ, ಅದ್ವೈತ, ವಿಶಿಷ್ಟ ಅದ್ವೈತ ಎಂಬ ಸಿದ್ಧಾಂತಗಳು ಪ್ರಚಲಿತದಲ್ಲಿದ್ದು, ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಜಾತಿ, ಮತ, ಭಾಷೆ, ಪ್ರದೇಶ ಎಂಬ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮದ ಉನ್ನತಿಗೆ ರೇಣುಕಾಚಾರ್ಯರು ಶ್ರಮಿಸಿದ್ದಾರೆ ಎಂದು ಪ್ರತಿಪಾದಿಸಿದರು.
ಆಧುನಿಕತೆ, ವಿಜ್ಞಾನ, ಪರಿವರ್ತನೆ ಯುಗದಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆಗಳಾಗುತ್ತಿದ್ದು, ಮನುಷ್ಯನ ಆತ್ಮ ಜ್ಞಾನವನ್ನು ಹೆಚ್ಚಿಸುವುದಕ್ಕೆ ಹಲವು ಮಾರ್ಗದರ್ಶನ ಇವೆ. ಅಂತಹ ದಾರ್ಶನಿಕರ ಜಗತ್ತಿನಲ್ಲಿ ಬಹು ಪ್ರಾಚೀನ ಕಾಲದಿಂದ ಜೀವಾತ್ಮ, ಪರಮಾತ್ಮ, ಜಗತ್ತು. ಬಂಧ ಮತ್ತು ಮೋಕ್ಷ ಎಂಬ ಪಂಚ ವಿಷಯಗಳ ಕುರಿತು ಚಿಂತನೆಗಳು ನಡೆಯುತ್ತವೆ ಎಂದರು.
ಯುಗ ಯುಗಗಳ ನಂಟು ಬೆಸೆದುಕೊಂಡಿರುವ ಪಂಚ ಆಚಾರ್ಯರ ಪರಂಪರೆಯಲ್ಲಿ ಜಗದ್ಗುರು ರೇಣುಕಾಚಾರ್ಯರು ಪ್ರಾಚೀನ ಕಾಲದಲ್ಲಿ ಅಸ್ಪಶ್ಯತೆಯನ್ನು ತೊಡೆದು ಸರ್ವಜನಾಂಗಕ್ಕೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಕ್ರಾಂತಿ ಪುರುಷ ಎಂದು ಆರ್.ಐಶ್ವರ್ಯ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಇತರರು ಇದ್ದರು.