

ಬಾದಾಮಿ: ಹಡಪದ ಅಪ್ಪಣ್ಣನವರು ನಮ್ಮ ನಾಡಿನ ಆಸ್ತಿ, ಬಸವಾದಿ ಶರಣರ ಕಾಲದ ಎಲ್ಲ ಶರಣರು ಸಮ ಸಮಾಜವನ್ನು ನಿರ್ಮಿಸುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಹೊರವಲಯದ ರಂಗನಾಥ ನಗರದ ಹಡಪದ ಸಮುದಾಯದ ಆವರಣದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕಾಡಳಿತ ಹಾಗೂ ತಾಪಂ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಸಮುದಾಯ ಭವನದ ಭೂಮಿ ಪೂಜೆ ಹಾಗೂ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಡಾ. ವಿ.ಸಿ. ಹಡಪದ ಮಾತನಾಡಿ, ಶರಣರ ತತ್ವಾದರ್ಶ, ಅವರ ವಚನಗಳ ಸಾರ ಮುಂದಿನ ಪೀಳಿಗೆಗೆ ತಿಳಿಸಬೇಕು. ಶರಣರು ತೋರಿಸಿದ ಜ್ಞಾನ ಪಥದಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ನಮ್ಮ ಸಮಾಜದ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿ ಎಂದು ಹೇಳಿದರು.
ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಶಂಕರ ಕನಕಗಿರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವು ಹಿರೇಮಠ, ಮಲಪ್ಪ ಹಡಪದ, ಸಂಗಪ್ಪ ಅಮರಾವತಿ, ಮಹಾಂತೇಶ ಕೊಪ್ಪದ, ಎಂ.ಎನ್. ದ್ಯಾಮಗೊಂಡ, ಮಲ್ಲಿಕಾರ್ಜುನ ಹಡಪದ, ಗೋವಿಂದಪ್ಪ ಹಡಪದ, ಬಸವರಾಜ ಹಡಪದ, ಆರ್.ಸಿ. ಹಡಪದ ಇದ್ದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ಕೆ.ಆರ್.ಐ.ಡಿ.ಎಲ್. ವತಿಯಿಂದ ಹಡಪದ ಅಪ್ಪಣ್ಣ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ನೆರವೇರಿಸಿದರು.