

ಸರಗೂರು: ಮಹಿಳೆಯರ ಸ್ಥಿತಿ ಇಂದು ಬದಲಾಗಿದೆ. ಆಕೆಯೂ ವಿದ್ಯಾವಂತಳಾಗಿದ್ದಾಳೆ. ತನ್ನ ಮನೆಯನ್ನು ಆರ್ಥಿಕವಾಗಿ ಮುನ್ನಡೆಸುತ್ತಿದ್ದಾಳೆ ಎಂದರೆ ಅದಕ್ಕೆ ಮುಖ್ಯ ಕಾರಣ ಮಹಿಳಾ ಸಬಲೀಕರಣ. ಇಂದು ಶಿಕ್ಷಣವೆಂಬುದು ಪ್ರತಿಯೊಬ್ಬರ ಹಕ್ಕಾಗಿದ್ದು, ಅದರಲ್ಲಿಯೂ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪಟ್ಟಣದ ಆರ್ಯ ಈಡಿಗ ಸಮುದಾಯದ ಭವನದಲ್ಲಿ ಸೋಮವಾರ ನಡೆದ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಬೌದ್ಧಿಕವಾಗಿ, ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸಿರುವುದಲ್ಲದೇ ಗ್ರಾಮೀಣರ ಬದುಕನ್ನು ಬದಲಾಯಿಸಿದೆ. ಸ್ವಾವಲಂಬನೆಯ ಜೀವನಕ್ಕೆ ಅಡಿಪಾಯ ಹಾಕುತ್ತ, ಹಳ್ಳಿಯ ಜನರಲ್ಲಿ ನಾಯಕತ್ವ ಬೆಳೆಸುವ, ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶವನ್ನಿರಿಸಿಕೊಂಡಿರುವ ಸ್ವಸಹಾಯ ಸಂಘಗಳು ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಎಂಬ ಗಾಂಧೀಜಿಯ ಕನಸನ್ನು ನನಸು ಮಾಡುವಲ್ಲಿ ತನ್ನ ಛಾಪನ್ನು ಮೂಡಿಸಿದೆ ಎಂದರು.
ವಿಧಾನಪರಿಷತ್ತಿನ ಸದಸ್ಯ ಸುಜಾ ಕುಶಲಪ್ಪ, ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ್, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಎಚ್.ಡಿ. ಕೋಟೆ ತಾಲೂಕು ಅಧ್ಯಕ್ಷ ಶಂಭೇಗೌಡ , ಸರಗೂರು ಮಂಡಲ ಅಧ್ಯಕ್ಷ ಶ್ರೀ ಗುರುಸ್ವಾಮಿ, ಮುಖಂಡರಾದ ಬಾಲಕೃಷ್ಣ, ಪಾಪಣ್ಣ, ಮಂಜುನಾಥ್, ಗುರುಸ್ವಾಮಿ, ಪರಶುರಾಮಪ್ಪ, ಪರೀಕ್ಷಿತ್‌ರಾಜ್ ಅರಸ್, ಮಾದಾಪುರ ನಂದೀಶ್, ಮಂಜುಳಾ ದೇವಣ್ಣ, ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ, ಮಂಜುನಾಥ್ ಇತರರಿದ್ದರು.