

ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಜಾಗತಿಕ ಆರೋಗ್ಯ ಅಗತ್ಯ ಪೂರೈಸಲು ಔಷಧಕಾರರ ಪಾತ್ರ ದೊಡ್ಡದಿದೆ ಎಂದು ಜಿಲ್ಲಾ ಉಪ ಔಷಧ ನಿಯಂತ್ರಕ ಡಾ.ನಾಗರಾಜ್ ಎಸ್. ಹೇಳಿದರು.
ನಗರದ ಕೆಎಲ್‌ಇ ಕಾಹೆರ್, ಫಾರ್ಮಸಿ ಕಾಲೇಜು, ಇಂಡಿಯನ್ ಫಾರ್ಮಸಿಟಿಕಲ್ ಸಂಘ, ಜಿಲ್ಲಾ ಔಷಧ ನಿಯಂತ್ರಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಫಾರ್ಮಸಿಸ್ಟ್ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಕಿತ್ಸೆಗೆ ಅಗತ್ಯವಿರುವ, ರೋಗಿಗಳ ಸುರಕ್ಷತೆಗಾಗಿ ಔಷಧ ಪೂರೈಸುವಲ್ಲಿ ಔಷಧಕಾರರ ಪಾತ್ರ ಮಹತ್ವದ್ದು ಎಂದರು.
ಕುಲಸಚಿವ ಡಾ.ಎಂ.ಎಸ್.ಗಣಾಚಾರಿ ಮಾತನಾಡಿ, ಆರೋಗ್ಯ ವ್ಯವಸ್ಥೆ ಬಲಪಡಿಸುವಲ್ಲಿ ಔಷಧಕಾರರು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.ಸಮುದಾಯಕ್ಕೆ ಸೇವೆ ಸಲ್ಲಿಸಲು ಔಷಧಕಾರರು ಇತರರಿಗೆ ಮಾದರಿಯಾಗಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಔಷಧಕಾರರು ಮಾಡಿದ ಸೇವೆ ಶ್ಲಾಘಿಸಿದರು.
ಕೆಎಲ್‌ಇ ಫಾರ್ಮಸಿ ಕಾಲೇಜ್‌ನ ಪ್ರಾಂಶುಪಾಲ ಡಾ. ಸುನೀಲ್ ಎಸ್. ಜಲಾಲ್‌ಪುರೆ ಮಾತನಾಡಿ, ಆರೋಗ್ಯ ವ್ಯವಸ್ಥೆಯ ವಿವಿಧ ಕ್ಷೇತ್ರಗಳಲ್ಲಿ ಫಾರ್ಮಸಿಸ್ಟ್ ಪಾತ್ರ ಮತ್ತು ಔಷಧೀಯ ವಿಜ್ಞಾನ ಕ್ಷೇತ್ರದಲ್ಲಿ ಜ್ಞಾನ ಮತ್ತು ಕೌಶಲಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯತೆಯ ಕುರಿತು ವಿವರಿಸಿದರು. ಆರೋಗ್ಯ ವ್ಯವಸ್ಥೆಗಳಿಗೆ ಅಗತ್ಯವಿರುವ ಸೇವೆ ನೀಡಲು ಪ್ರಸ್ತುತ ಸನ್ನಿವೇಶ ಮತ್ತು ಫಾರ್ಮಸಿ ವೃತ್ತಿಯ ಭವಿಷ್ಯದ ಪ್ರಾಸ್ಪೆಕ್ಟಸ್‌ಗೆ ಒತ್ತು ನೀಡಿದರು.
ರೋಗಿಗಳ ಸಮಾಲೋಚನೆಯಲ್ಲಿ ಗಮನಾರ್ಹ ಕೊಡುಗೆಗಾಗಿ ಅತ್ಯುತ್ತಮ ಫಾರ್ಮಾಸಿಸ್ಟ್ ಪ್ರಶಸ್ತಿಯನ್ನು ಕಣಗಲಾ ಪೂರ್ಣಾಕ್ಷಿ ಔಷಧ ಅಂಗಡಿ ಶಾಂತಾ ನರೇಂದ್ರ ಕಾಮತೆ ಅವರಿಗೆ ನೀಡಿ ಗೌರವಿಸಲಾಯಿತು. ಡಾ.ಎಂ.ಡಿ.ಖರಾಯ ಪ್ರಶಸ್ತಿಗಾಗಿ ಕೆಎಲ್‌ಇ ಫಾರ್ಮಸಿ ಕಾಲೇಜ್‌ನ ಪ್ರಾಂಶುಪಾಲ ಡಾ. ಸುನೀಲ್ ಎಸ್. ಜಲಾಲ್‌ಪುರೆ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ್ ಕೆ.ಎಸ್., ರಘುರಾಮ್, ಮನೋಹರ ಕೆ.ವಿ., ರೇಣುಪ್ರಸಾದ ಎಂ.ಎಸ್., ದಯಾನಂದ ಕೆ. ಡಾ.ಸುನೀಲ್ ಎಸ್.ಜಲಾಲಪುರೆ, ಪ್ರಾಂಶುಪಾಲ ಡಾ.ಎಂ.ಬಿ.ಪಾಟೀಲ, ಡಾ. ವಿ.ಎಸ್.ಮಾಸ್ತಿಹೊಳಿಮಠ, ಡಾ.ವಿ.ಎಸ್.ಮಣ್ಣೂರ ಇತರರಿದ್ದರು.