ರಸ್ತೆ ಸುರಕ್ಷತೆಯಲ್ಲಿ ಜನರ ಪಾತ್ರ ದೊಡ್ಡದು

H1 RTO Appayya
Published on

ಹುಬ್ಬಳ್ಳಿ: ರಸ್ತೆ ಸುರಕ್ಷತೆಯಲ್ಲಿ ಸಾರಿಗೆ ಇಲಾಖೆ ಜತೆಗೆ ಸಾರ್ವಜನಿಕರ ಪಾತ್ರವೂ ದೊಡ್ಡದು. ಈ ಹೊಣೆಗಾರಿಕೆಯಲ್ಲಿ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಧಾರವಾಡ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ಹೇಳಿದರು.

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಸಾರಿಗೆ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ವಿದ್ಯಾನಗರದ ಕಾಡಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ವಾಹನಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡು, ಅಗತ್ಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದರು.

ಪ್ರಾಂಶುಪಾಲ ಡಾ.ಉಮಾ ನೆರಲೆ ಮಾತನಾಡಿ, ವಿದ್ಯಾರ್ಥಿಗಳು ನಿಯಮಾನುಸಾರವಾಗಿ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು. ರಸ್ತೆ ನಿಯಮಗಳನ್ನು ಪಾಲಿಸಬೇಕು, ಸಂಚಾರಿ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಸಹಕರಿಸಬೇಕು. ಧಾವಂತದಲ್ಲಿ ವಾಹನಗಳನ್ನು ಓಡಿಸಬಾರದು. ಜೀವ ಅಮೂಲ್ಯವಾದುದು. ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ಅವಘಡಗಳಿಗೆ ತುತ್ತಾಗಬಾರದು ಆದಷ್ಟು ಜಾಗ್ರತೆಯಿಂದ ವಾಹನ ಚಲಾಯಿಸಬೇಕು ಎಂದರು.

ಸಾರಿಗೆ ಇಲಾಖೆಯಿಂದ ಪ್ರಕಟಿಸಿರುವ ರಸ್ತೆ ಸುರಕ್ಷತಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಸಮಾರಂಭದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ.ಆರ್.ದೇಸಾಯಿ, ಹುಬ್ಬಳ್ಳಿ ರೆಡ್​ಕ್ರಾಸ್ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net