

ಯಳಂದೂರು: ಮಕ್ಕಳ ಕಲಿಕೆಯಲ್ಲಿ ಪಾಲಕರು ಹಾಗೂ ಸಮುದಾಯದ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಸಲಹೆ ನೀಡಿದರು.
ಗುರುವಾರ ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಶಿಕ್ಷಣ ಫೌಂಡೇಷನ್ ಸಹಯೋಗದಲ್ಲಿ ಎಫ್‌ಎಲ್‌ಎನ್ ಮತ್ತು ಯೋಜನಾ ಆಧಾರಿತ ಕಲಿಕಾ ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಲಿಕೆ ಫಲಪ್ರದವಾಗಲು ಅಭ್ಯಾಸ ಮುಖ್ಯವಾಗಿದೆ. ಮಕ್ಕಳು ಶಾಲೆಯಲ್ಲಿ ಕಲಿತ ವಿಷಯಗಳನ್ನು ಪುನರ್ಮನನ ಮಾಡಿಕೊಳ್ಳುವುದು ತುಂಬ ಅಗತ್ಯವಾಗಿರುತ್ತದೆ. ಆದರೆ ಇದನ್ನು ಮನೆಯಲ್ಲಿ ಅಥವಾ ಸಾಮೂಹಿಕ ಕಲಿಕೆಯಲ್ಲಿ ಶಾಲಾ ಸಮಯ ಹೊರತುಪಡಿಸಿ ಕಲಿಯುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ತಮ್ಮ ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಅಗತ್ಯ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಪಾಲಕರ ಪಾತ್ರವೂ ಪ್ರಮುಖವಾಗಿದ್ದು ಜವಾಬ್ದಾರಿಯನ್ನು ಅರಿತು ಮಕ್ಕಳ ಕಲಿಕೆಯಲ್ಲಿ ಪ್ರಗತಿಯನ್ನು ಕಾಣಲು ಸಹಕರಿಸುವಂತೆ ಶಿಕ್ಷಕರು ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬಿಆರ್‌ಸಿ ಪುಷ್ಪಲತಾ, ರಂಗಸ್ವಾಮಿ, ಸತೀಶ್, ಸಿಆರ್‌ಪಿಗಳಾದ ರೇಚಣ್ಣ, ಎಸ್. ಭಾರತಿ, ಶಿಕ್ಷಣ ಸಂಯೋಜಕ ಸುರೇಶ್‌ಕುಮಾರ್ ಶಿಕ್ಷಣ ಫೌಂಡೇಷನ್‌ನ ಗಿರೀಶ್, ಸಂತೋಷ್ ವಿವಿಧ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.