

ಧಾರವಾಡ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕೇತರ ನೌಕರರ ಪಾತ್ರ ಬಹಳ ಮಹತ್ವ ಪಡೆದಿದ್ದು, ಶಿಕ್ಷಕೇತರ ಸಿಬ್ಬಂದಿ ತಮ್ಮ ಕೆಲಸ-ಕಾರ್ಯಗಳಿಂದ ಜನರ ಮನಸಿನಲ್ಲಿ ಉಳಿಯುವಂತೆ ವೃತ್ತಿಪರತೆ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವವಿದ್ಯಾಲಯ ಯುಜಿಸಿ ಮಾಳವಿಯಾ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್‌ನ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಶಿಕ್ಷಕೇತರ ಸಿಬ್ಬಂದಿಗೆ ಆಯೋಜಿಸಿರುವ 'ಸಾಮರ್ಥ್ಯ ವೃದ್ಧಿ ಮತ್ತು ಕೌಶಲ ವೃದ್ಧಿ' ಆರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕೇತರ ಸಿಬ್ಬಂದಿ ಸಂವಹನ ಕೌಶಲ, ಸಂಯಮ, ತಾಳ್ಮೆಯಿಂದ ಸಕಾರಾತ್ಮಕವಾಗಿ ಸ್ಪಂದಿಸುವ ಹಾಗೂ ಜನರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳಬೇಕು. ವಿಶ್ವವಿದ್ಯಾಲಯದ ಕಾಯ್ದೆ, ನಿಯಮ, ಸರ್ಕಾರದ ನೀತಿ-ನಿಯಮಗಳನ್ನು ಅರಿಯುವುದು ಆಡಳಿತಾತ್ಮಕವಾಗಿ ಹೆಚ್ಚು ಅವಶ್ಯಕತೆ ಇದೆ. ಸ್ವಯಂ ಶಿಸ್ತು, ಸಮಯ ಪಾಲನೆ ಬಹಳ ಅಗತ್ಯ. ಆಡಳಿತಾತ್ಮಕ ದೃಷ್ಟಿಯಿಂದ ಲೆಕ್ಕಪರಿಶೋಧನೆ, ಹಣಕಾಸು, ಆಡಳಿತ ನಿರ್ವಹಣೆ ಕೌಶಲ ಹೊಂದುವುದು ಇಂದಿನ ಅಗತ್ಯವಾಗಿದೆ. ಪ್ರತಿಯೊಬ್ಬ ನೌಕರನು ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಕಾರ್ಯ ದಕ್ಷತೆ ಹೆಚ್ಚುತ್ತದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಸಿ.ಕೃಷ್ಣಮೂರ್ತಿ ಮಾತನಾಡಿ, ಬದಲಾದ ಕಾಲಕ್ಕೆ ತಕ್ಕಂತೆ ಜ್ಞಾನ ವೃದ್ಧಿಸಿಕೊಳ್ಳಬೇಕು. ಕಲಿಕೆ ನಿರಂತರವಾದುದು. ಹೊಸದನ್ನು ಕಲಿಯುವ ಮತ್ತು ಅಳವಡಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಸೆಂಟರ್‌ನ ನಿರ್ದೇಶಕ ಡಾ.ಬಿ.ಎಚ್. ನಾಗೂರ ಮಾತನಾಡಿದರು.
ಡಿಪಿಆರ್ ವಿಭಾಗದ ಉಪ ಕುಲಸಚಿವ ಎಂ.ಎಂ. ಛಬ್ಬಿ, ಪರೀಕ್ಷಾ ವಿಭಾಗದ ಉಪಕುಲಸಚಿವ ಎಚ್.ಬಿ. ಬಗರಿಕರ, ಮಲ್ಲಿಕಾರ್ಜುನ ಮೆಣಸಿನಕಾಯಿ, ಎಸ್.ಎಂ. ಚಿಕ್ಕಮಠ, ಕೆ.ಎಂ. ಜೋಶಿ, ಎಸ್.ಎಂ. ಪಾಟೀಲ, ಶಾಲೋಮಿತ ಇತರರಿದರು.