ಮಕ್ಕಳ ಆರೋಗ್ಯ ಕಾಪಾಡುವಲ್ಲಿ ತಾಯಂದಿರ ಪಾತ್ರ ಮುಖ್ಯ

IMG-20230922-WA0321
ಆಲೂರು ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಎಂ.ಸಿ.ನಿರ್ಮಲಾ, ಎ.ಟಿ.ಮಲ್ಲೇಶ್, ಕೇಶವ್, ಜಯಶ್ರೀ, ಕೆ.ಎನ್. ಮಂಜೇಗೌಡ, ನಾಜಿರಾ, ಆರ್.ಬಿ.ಸುರೇಶ್ ಉಪಸ್ಥಿತರಿದ್ದರು.
Published on

ಆಲೂರು: ಮಕ್ಕಳ ಆರೋಗ್ಯ ಕಾಪಾಡುವಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದು ಅವರ ಜವಾಬ್ದಾರಿಯೂ ಆಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶರೂ ಆದ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಂ.ಸಿ.ನಿರ್ಮಲಾ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಗರ್ಭಿಣಿಯರಾದ ಸಂದರ್ಭದಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡುವುದು ಅಗತ್ಯವಾದದ್ದು. ಅದನ್ನು ಸೇವನೆ ಮಾಡದೆ ನಿರ್ಲಕ್ಷೃ ವಹಿಸಿದರೆ ಹುಟ್ಟುವ ಮಕ್ಕಳ ತೂಕ ಕಡಿಮೆಯಾಗುತ್ತದೆ. ಅಪೌಷ್ಟಿಕತೆಯಿಂದ ಮಕ್ಕಳು ನಲುಗಿ ರಕ್ತಹೀನತೆಯಿಂದ ಬಳಲುವ ಸಾಧ್ಯತೆ ಇದೆ. ಅಲ್ಲದೆ ಹೆರಿಗೆ ಸಮಯದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲಬೇಕಾಗುತ್ತದೆ ಎಂದರು.

ಸಿಡಿಪಿಒ ಎ.ಟಿ.ಮಲ್ಲೇಶ್ ಮಾತನಾಡಿ, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಇಲಾಖೆಯಿಂದ 4 ವಾರಗಳ ಕಾಲ ರಾಷ್ಟ್ರೀಯ ಪೌಷ್ಟಿಕತೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಕನಿಷ್ಠ 2 ವರ್ಷದವರೆಗಾದರೂ ಎದೆಹಾಲು ಕುಡಿಸಬೇಕು. ಇದರಿಂದ ಮಕ್ಕಳಲ್ಲಿ ರಕ್ತಹೀನತೆ, ಅತಿಸಾರ ಭೇದಿ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರಧಾನಮಂತ್ರಿ ಮಾತೃ ವಂದನಾ, ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

30 ಅಂಗನವಾಡಿ ಕೇಂದ್ರಗಳ ಮಹಿಳೆಯರು ಸಂಗ್ರಹಿಸಿದ್ದ ಪೌಷ್ಟಿಕಾಂಶವುಳ್ಳ ಸೊಪ್ಪು, ತರಕಾರಿ, ಕಾಳು, ಬೇಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದೇ ವೇಳೆ ಏಳು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಸುರೇಶ್, ತಾ.ಪಂ ಸಹಾಯಕ ನಿರ್ದೇಶಕ ಕೇಶವ್, ಎಪಿಪಿ ಜಯಶ್ರೀ, ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಕ ಸತೀಶ್, ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಮಂಜೇಗೌಡ, ಮಹಿಳಾ ಒಕ್ಕೂಟದ ಅಧ್ಯಕ್ಷೆ ನಾಜಿರಾ, ವಕೀಲರಾದ ಆರ್.ಬಿ.ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net