ಶಿಕ್ಷಣ ನೀಡುವಲ್ಲಿ ಮಠಗಳ ಪಾತ್ರ ಅನನ್ಯ

01-02--krs1 (2)
Published on

ಕೆ.ಆರ್.ಸಾಗರ: ಹುಲಿಕೆರೆ ಗ್ರಾಮದ ಕೆ.ಆರ್.ಸಾಗರ ರಸ್ತೆಯಲ್ಲಿರುವ ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಬುಧವಾರ ಸಂಜೆ 9ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು.


ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಮಾರಂಭವನ್ನು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.


ಶಾಲೆಯ 2023-24 ಸಾಲಿನ ಪಾಲಕರ ಕ್ರೀಡಾಕೂಟದಲ್ಲಿ ವಿಜೇತರಾದ ಪಾಲಕರಿಗೆ ಮತ್ತು ಉತ್ತಮ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಬಹುಮಾನ ವಿತರಣೆ ಮಾಡಿದರು. 2023ರಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಟ್ಯಾಬ್ ವಿತರಣೆ ಮಾಡಿದರು.


ಕೆ.ಆರ್.ಸಾಗರ ಠಾಣೆಯ ಪಿಎಸ್ಸೈ ಬಿ.ಬಸವರಾಜು ಮಾತನಾಡಿ, ಶಿಕ್ಷಣ ನೀಡುವಲ್ಲಿ ಮಠಗಳ ಪಾತ್ರ ದೊಡ್ಡದಿದೆ. ಮಠಗಳಲ್ಲಿ ಶ್ರದ್ಧೆಯ ಪಾಠದ ಜತೆ ಉತ್ತಮ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನಗಳಿಸುತ್ತಾರೆ. ಮಠಗಳು ಸನ್ಮಾರ್ಗ ತೋರಿಸುವಲ್ಲಿ ದೊಡ್ಡ ಪಾತ್ರ ವಹಿಸಿವೆ ಎಂದರು.


ಸಾಹಿತಿ ಮಜ್ಜಿಗೆಪುರ ಶಿವರಾಂ ಮಾತನಾಡಿ, ಆದಿಚುಂಚನಗಿರಿ ಸಂಸ್ಥಾನ ಮಠಗಳು ಹುದ್ದೆಗಳಲ್ಲಿ ಮತ್ತು ಶಿಕ್ಷಣದಲ್ಲಿ ಯಾವುದೇ ಜಾತಿ-ಧರ್ಮ ಎನ್ನದೇ ಎಲ್ಲರಿಗೂ ಉತ್ತಮ ಅವಕಾಶ ನೀಡುತ್ತಿದ್ದು, ದೇಶದಲ್ಲಿ ಮಾದರಿ ಮಠವಾಗಿದೆ. ಇಲ್ಲಿನ ಸಂಸ್ಕೃತಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳೇ ಭಾಗ್ಯವಂತರು ಎಂದರು.


ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಮಕ್ಕಳು ಕೇವಲ ಅಕ್ಷರಭ್ಯಾಸಕ್ಕೆ ಸಿಮೀತಗೊಳಿಸದೆ ಇತರ ಚಟುವಟಿಕೆಯಲ್ಲಿಯೂ ತೊಡಗಿಕೊಳ್ಳಬೇಕು, ಬೆಳೆಯುವ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಓದಿಗೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಲು ಪ್ರೋತ್ಸಾಹ ನೀಡಬೇಕು ಎಂದರು.


ಶ್ರೀರಂಗಪಟ್ಟಣ ತಾಲೂಕು ಶಿಕ್ಷಣಾಧಿಕಾರಿ ಅನಂತರಾಜು ಮಾತನಾಡಿದರು. ಮುಖ್ಯಶಿಕ್ಷಕಿ ಕೆ.ಆಶಾ 2023-24ನೇ ಸಾಲಿನ ಶಾಲೆ ಶೈಕ್ಷಣಿಕ ಮತ್ತು ಇತರ ಚಟುವಟಿಕೆ ಕುರಿತು ವರಿದಿ ಓದಿದರು. ವಿದ್ಯಾರ್ಥಿಗಳು ಡೊಳ್ಳು ಕುಣಿತ, ರೈತಗೀತೆ, ಯಕ್ಷಗಾನ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು, ಹುಲಿಕರೆ ಗ್ರಾಪಂ ಅಧ್ಯಕ್ಷೆ ಶ್ವೇತಾ ಕೃಷ್ಣ, ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷೆ ಶ್ರುತಿ ಶ್ರೀನಿವಾಸ್, ಉಪಾಧ್ಯಕ್ಷ ರವಿಶಂಕರೇಗೌಡ, ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಗ್ರಾಪಂ ಸದಸ್ಯೆ ಶ್ರುತಿ ಯೋಗೇಶ್, ರವಿಕುಮಾರ್, ಹುಲಿಕೆರೆ ಗ್ರಾಪಂ ಸದಸ್ಯ ಕರೀಗೌಡ, ಕೆ.ಆರ್.ಸಾಗರ ಸಿಆರ್‌ಪಿ ಮಹೇಶ್, ಗ್ರಾಮ ಲೆಕ್ಕಿಗರಾದ ರಘು, ರಮೇಶ, ಮುಖ್ಯಶಿಕ್ಷಕಿ ಆಶಾ, ಕಚೇರಿ ವ್ಯವಸ್ಥಾಪಕ ಅಭಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net