

ವಿಜಯವಾಣಿ ಸುದ್ದಿಜಾಲ ಧಾರವಾಡ
ನ್ಯಾಯದಾನದ ವಿಳಂಬತೆ ತಪ್ಪಿಸಲು ಮತ್ತು ನ್ಯಾಯಾಲಯಗಳ ಕಾರ್ಯ ಒತ್ತಡ ಕಡಿಮೆ ಮಾಡುವಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ನ್ಯಾಯಾಧೀಶರು, ನ್ಯಾಯವಾದಿಗಳು ಕಕ್ಷಿದಾರರಿಗೆ ತ್ವರಿತ ನ್ಯಾಯಾಲಯ, ಲೋಕ ಅದಾಲತ ಮತ್ತು ಮಧ್ಯಸ್ಥಿಕೆ ಕೇಂದ್ರಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಗದಗ, ಧಾರವಾಡ ಜಿಲ್ಲೆಗಳ ನ್ಯಾಯವಾದಿಗಳಿಗೆ ಶನಿವಾರ ಏರ್ಪಡಿಸಿದ್ದ ಪುನರ್ ಮನನ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಧ್ಯಸ್ಥಿಗಾರಿಕೆ ಒಂದು ಕೌಶಲ. ಕಾನೂನು ಚೌಕಟ್ಟಿನಲ್ಲಿ ಪ್ರಕರಣಗಳನ್ನು ಸುಗಮವಾಗಿ ಪರಿಹರಿಸಬೇಕು. ಜನರ ಮಧ್ಯದಲ್ಲಿರುವ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಮಧ್ಯಸ್ಥ ನ್ಯಾಯವಾದಿಗಳ ಪಾತ್ರ ಮಹತ್ವದ್ದು. ಮಧ್ಯಸ್ಥಿಕೆ ಕಾರ್ಯಾಗಾರದಲ್ಲಿ ಪೂರ್ಣ ಮಾಹಿತಿ ಪಡೆದು ಉಭಯ ಕಕ್ಷಿದಾರರಿಗೆ ಅದರ ಅನುಕೂಲತೆ ತಿಳಿಸಬೇಕು. ಅವರು ಸ್ವಯಂ ಆಗಿ ಒಪ್ಪಿಗೆ ಸೂಚಿಸುವಂತೆ ಅರಿವು ಮೂಡಿಸಬೇಕು. ವಿವಾದಗಳನ್ನು ಬಗೆ ಹರಿಸುವ ಹಂತಕ್ಕೆ ಒಯ್ಯುವುದು ಒಂದು ಜಾಣತನ ಎಂದರು.
ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ ವಿ.ಡಿ.ಕಾಮರಡ್ಡಿ, ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಮಾತನಾಡಿದರು. ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಆನಂದಕುಮಾರ ಮಗದುಮ್ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ಮಧ್ಯಸ್ಥಿಕೆಗಾರ ಕೇಂದ್ರದ ಲಕ್ಷ್ಮೀಶರಾವ್, ಬಿನಾ ದೇವರಾಜ್, ಜಿಲ್ಲಾ ನ್ಯಾಯಾಲಯಗಳ ವಿವಿಧ ನ್ಯಾಯಾಧೀಶರು, ಗದಗ, ಧಾರವಾಡ ಜಿಲ್ಲೆಗಳ ಮಧ್ಯಸ್ಥಗಾರ ನ್ಯಾಯವಾದಿಗಳು, ಇತರರು ಇದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಸ್ವಾಗತಿಸಿದರು. ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ದೀಪಕ ವಾಳದ ನಿರೂಪಿಸಿದರು. ವೈ.ಪಿ.ಮದ್ನೂರ ವಂದಿಸಿದರು.