ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ ಅನನ್ಯ; ಉಪ ಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ

K N PHANEENDRA SANMANA
ವಿಜಯಪುರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನ್ಯಾಯಾಧೀಶ ಶಿವಾಜಿ ನಲವಡೆ, ಅರವಿಂದ ಎಸ್.ಹಾಗರಗಿ, ಪ್ರಕಾಶ ಎಲ್. ನಾಡಗೇರ ಮತ್ತಿತರರಿದ್ದಾರೆ.
Published on

ವಿಜಯಪುರ: ದುರ್ಬಲರಿಗೆ, ಅನ್ಯಾಯಕ್ಕೊಳಗಾದವರಿಗೆ ಕಾನೂನು ರಕ್ಷಣೆ ನಿಡುವ ಮೂಲಕ ಅವರಿಗೆ ನ್ಯಾಯ ದೊರಕಿಸುವ ಬಹು ದೊಡ್ಡ ಜವಾಬ್ದಾರಿ ವಕೀಲರ ಮೇಲಿದ್ದು, ವಕೀಲರು ಕಾನೂನಿನ ಸಂಪೂರ್ಣ ಅರಿವು ಹೊಂದುವ ಮೂಲಕ ನ್ಯಾಯ ದೊರಕಿಸಲು ಮುಂದಾಗಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹತ್ವದ ಕಾನೂನು ರಚನೆ ಹಾಗೂ ತಿದ್ದುಪಡಿಯಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ. ವಕೀಲರು ಸಮಾಜಕ್ಕೆ ಹತ್ತಿರವಿರುವ ಲೋಕಾಯುಕ್ತ ಕಾನೂನಿನ ಬಗ್ಗೆ ತಿಳಿದುಕೊಂಡು ಸಮಾಜಕ್ಕೆ ಎಲ್ಲರಿಗೂ ಸಹಾಯ ಮಾಡಲು ಅವಕಾಶವಿದೆ. ಸಮಾಜದಲ್ಲಿ ಎಲ್ಲರೂ ಗೌರವಯುತವಾಗಿ ಜೀವನ ನಡೆಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಸಂವಿಧಾನದ ಆಶಯವೂ ಇದಾಗಿದೆ. ಈ ನಿಟ್ಟಿನಲ್ಲಿ ದುರ್ಬಲರಿಗೆ, ಕಾನೂನು ರಕ್ಷಣೆ ನಿಡುವ ಮೂಲಕ ಅವರ ಜೀವನ ಸಮೃದ್ಧಗೊಳಿಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಸಮಾಜದಲ್ಲಿ ವಕೀಲರಿಗೆ ವಿಶೇಷವಾದ ಗೌರವವಿದೆ. ಜನರು ತಮಗೆ ಕಷ್ಟ ಬಂದಾಗ, ಅನ್ಯಾಯವಾದಾಗ ಮೊದಲಿಗೆ ಅವರು ನ್ಯಾಯಾಂಗ ಮೇಲೆ ನಂಬಿಕೆ, ಭರವಸೆಯನ್ನಿಟ್ಟು ವಕೀಲರತ್ತ ಧಾವಿಸುತ್ತಾರೆ. ಹಾಗಾಗಿ ಸಮಾಜ ಹಾಗೂ ಉತ್ತಮ ಆಡಳಿತಕ್ಕೆ ವಕೀಲರ ಪಾತ್ರ ಅತಿಮುಖ್ಯವಾಗಿದೆ. ಜನರ ಭರವಸೆಯಂತೆ ನಾವು ಅವರಿಗೆ ನ್ಯಾಯ ದೊರಕಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಜವಾಬ್ದಾರಿಯನ್ನಿರಿತು, ಕಾನೂನಿನ ಸಂಪೂರ್ಣ ಅರಿವು ಹಾಗೂ ಸಮಾಜಕ್ಕೆ ಅತಿ ಹತ್ತಿರವಾದ ಲೋಕಾಯುಕ್ತ ಕಾಯ್ದೆಯನ್ನು ಅರಿತುಕೊಂಡು ವಕೀಲರು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಪ್ರತಿಯೊಂದು ಪ್ರಕರಣಗಳಲ್ಲೂ ವಿಶಿಷ್ಟತೆ ಇರುತ್ತದೆ. ಇದನ್ನರಿತುಕೊಂಡು ಕಾನೂನುಬದ್ಧವಾಗಿ, ಕಾನೂನು ರಕ್ಷಣೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸಿ, ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಕರ್ತವ್ಯವನ್ನು ಸಾರ್ಥಕತೆಗೊಳಿಸಬೇಕು ಎಂದು ಅವರು ಹೇಳಿದರು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ, ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್.ಹಾಗರಗಿ, ಲೋಕಾಯುಕ್ತ ವಿಚಾರಣೆ ಶಾಖೆ ಉಪನಿಬಂಧಕ ಪ್ರಕಾಶ ಎಲ್. ನಾಡಗೇರ, ಲೋಕಾಯುಕ್ತ ಕಾನೂನು ಅಭಿಪ್ರಾಯದ ಸಹಾಯಕ ನಿಬಂಧಕ ಶುಭವೀರ, ಉಪ ಲೋಕಾಯುಕ್ತ ಆಪ್ತ ಕಾರ್ಯದರ್ಶಿ ಕಿರಣ ಪಿ.ಎಂ.ಪಾಟೀಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಚಾಗಶೆಟ್ಟಿ ಉಪಸ್ಥಿತರಿದ್ದರು. ವಕೀಲ ಆರ್.ಎಸ್. ನಂದಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net