ವ್ಯಕ್ತಿತ್ವ ವಿಕಾಸಕ್ಕೆ ಕುಟುಂಬಗಳ ಪಾತ್ರ ಮುಖ್ಯ : ಕಲ್ಮಳ್ಳಿ ನಟರಾಜು

6
Published on

ಜೆಎಸ್‌ಎಸ್ ನಗರದ ಎರಡನೇ ಹಂತದ ಬಡಾವಣೆಯ ಸಂಗಮ ಗೆಳೆಯರ ಬಳಗದ ವತಿಯಿಂದ ಆಲನಹಳ್ಳಿ ಬಡಾವಣೆಯ ಶ್ರೀಗುರು ಮಲ್ಲೇಶ್ವರ ಕುದೇರು ಶಾಖಾ ಮಠದಲ್ಲಿ ಮಂಗಳವಾರ ಸಂಘದ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ನೆರವೇರಿತು.

ಜೆಎಸ್‌ಎಸ್ ಮಹಾವಿದ್ಯಾ ಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಕಲ್ಮಳ್ಳಿ ನಟರಾಜು ಮಾತನಾಡಿ, ವ್ಯಕ್ತಿತ್ವ ವಿಕಾಸಕ್ಕೆ, ಪ್ರತಿಭೆ ಅನಾವರಣಗೊಳ್ಳಲು ಮತ್ತು ಸರ್ವತೋಮುಖ ಬೆಳವಣಿಗೆ ಕುಟುಂಬ, ನೆರೆಹೊರೆ, ಶಾಲೆ, ಸಂಘ-ಸಂಸ್ಥೆಗಳು ಮುಖ್ಯವಾಗುತ್ತವೆ. ಪ್ರಾಣಿಗಳಿಗಿಂತ ಮನುಷ್ಯ ಭಿನ್ನ. ಇದಕ್ಕೆ ಕಾರಣ ಅವನ ಆಲೋಚನಾ ಕ್ರಮವಾಗಿದೆ ಎಂದರು.

ಸುಖ, ದುಃಖಗಳನ್ನು ವ್ಯಕ್ತಪಡಿಸಲು ಇಂತಹ ಸಂಘಟನೆಗಳು ನೆರವಾಗುತ್ತವೆ. ಉಳ್ಳವರ ಶಕ್ತಿಯನ್ನು ದುರ್ಬಲರಿಗೆ ತಲುಪಿಸಲು ಇಂತಹ ಸಂಘಟನೆಗಳು ಸೇತುವೆಯಾಗಿ ಸಂಪರ್ಕ ಕಲ್ಪಿಸುತ್ತವೆ. ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಕಾರ ತತ್ವದಡಿ ಅಡಿಯಲ್ಲಿ ಕಾರ್ಯನಿರ್ವಹಿಸಿದಾಗ ಸಾರ್ಥಕವಾಗುತ್ತದೆ ಎಂದರು.

ಕುದೇರು ಮಠದ ಶ್ರೀ ಇಮ್ಮಡಿ ಗುರುಶಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ದೇವರಾಜ್ ಮಾತನಾಡಿದರು. ಬಳಗದ ಅಧ್ಯಕ್ಷ ಮಹದೇವ ಪ್ರಸಾದ್, ಕಾರ್ಯದರ್ಶಿ ಚೇತನ್ ಕುಮಾರ್, ಖಜಾಂಚಿ ಮಹದೇವಪ್ಪ, ಬಸವ ಬಳಗ ಪೂರ್ವ ವಲಯದ ಅಧ್ಯಕ್ಷ ಶಿವಸ್ವಾಮಿ, ಉಪಾಧ್ಯಕ್ಷ ಮಹಾದೇವಸ್ವಾಮಿ ಇತರರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಆರ್.ರವಿ, ಬಸವರಾಜಪ್ಪ, ಸಿದ್ದಲಿಂಗಸ್ವಾಮಿ, ಪುಟ್ಟಬುದ್ಧಿ, ಪ್ರಣವಮೂರ್ತಿ, ಚಾಮರಾಜು, ನಾಗೇಶ್ ಇತರರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net