

ಇಟಗಿ: ಪ್ರತಿ ವ್ಯಕ್ತಿಯ ವಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಣದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ಕಡತನಬಾಗೇವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕೊಠಡಿ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಸ್ಪರ್ಧಾತ್ಮಕ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವುದು ಅವಶ್ಯವಾಗಿದೆ. ಇದಕ್ಕಾಗಿ ಶಾಲೆಗೆ ಕ್ರೀಡಾ ಹಾಗೂ ವಿಜ್ಞಾನ ಉಪಕರಣಗಳ ಸೌಲಭ್ಯ ಒದಗಿಸಲು ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ಉನ್ನತ ಸ್ಥಾನ ಅಲಂಕರಿಸಿದರೂ ಕಲಿತ ಶಾಲೆ, ಶಿಕ್ಷಕರು ಹಾಗೂ ಹೆತ್ತವರನ್ನು ಗೌರವ ಮನೋಭಾವದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಯಳ್ಳೂರ, ಜಿಪಂ ಮಾಜಿ ಸದಸ್ಯ ಸುರೇಶ ಮ್ಯಾಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಗೌಡನ್ನವರ, ಮಲ್ಲಪ್ಪ ಮಾರಿಹಾಳ, ಮಲ್ಲಿಕಾರ್ಜುನ ಗಾಣಗಿ, ಸುರೇಶ ಹಾರುಗೊಪ್ಪ, ಶ್ರೀಧರ ಗಣಾಚಾರಿ, ಮಂಜು ಪೂಜಾರ, ಮುಖ್ಯಶಿಕ್ಷಕ ಎ.ಎನ್.ಮಾದಿಗರ ಇತರರಿದ್ದರು. ಎನ್.ಎಸ್.ಪಾಟೀಲ ನಿರೂಪಿಸಿದರು. ಆರ್.ಬಿ.ಪಂಡಿ ವಂದಿಸಿದರು.