

ಸಂಕೇಶ್ವರ: ಸತ್ಕಾರ್ಯಗಳೊಂದಿಗೆ ನಾಡಿನ ಮಠ-ಮಾನ್ಯಗಳಿಗೆ ಮಾದರಿಯಾದ ತ್ರಿವಿಧ ದಾಸೋಹ ನಡೆಸುವ ಮೂಲಕ ನಿಡಸೋಸಿ ಮಠದ ಪೂಜ್ಯರು ಧಾರ್ಮಿಕ ಮೌಲ್ಯಗಳನ್ನು ಉನ್ನತೀಕರಿಸಿದ್ದರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ನಿಡಸೋಸಿ ದುರದುಂಡೀಶ್ವರಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾದಾಸೋಹದಲ್ಲಿ ಶ್ರೀಗಳಿಂದ ಆಶೀರ್ವಾದ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಉತ್ತಮ ಬದಲಾವಣೆ ತರುವಲ್ಲಿ ಧರ್ಮದ ಕಾರ್ಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಭಕ್ತರು ನಡೆಸುವ ಮಹಾದಾಸೋಹ ಪರಂಪರೆ ವಿಶಿಷ್ಟವಾಗಿದೆ. ಈ ಭಕ್ತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ತಿಳಿಸಿದರು.
ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಮಠ ೩ ಶತಮಾನಗಳಿಂದ ಭಕ್ತಿ, ಅನ್ನ, ಅರಿವು ದಾಸೋಹದ ಮೂಲಕ ನಾಡಿನ ಅಸಂಖ್ಯಾತ ಭಕ್ತರ ಶ್ರದ್ಧಾಕೇಂದ್ರವಾಗಿದೆ ಎಂದರು.
ನಿಡಸೋಸಿ ಜಗದ್ಗುರು ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳ ಉತ್ಸವ ಮೂರ್ತಿಯ ಪಲ್ಲಕ್ಕಿ ಮಹೋತ್ಸವ ವಾದ್ಯಮೇಳ ಹಾಗೂ ಬಿರುದಾವಳಿಗಳೊಂದಿಗೆ ಜರುಗಿತು. ಮಧ್ಯಾಹ್ನ ಮಹಾದಾಸೋಹ ಪ್ರಸಾದ ಪೂಜಾ ಸಮಾರಂಭಕ್ಕೆ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ಬೆಳಗಾವಿ ಕಾರಂಜಿ ಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಅರಬಾವಿ ಗುರುಬಸವಲಿಂಗ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಬೆಂಡವಾಡದ ಗುರುಸಿದ್ಧ ಸ್ವಾಮೀಜಿ, ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ಹಾರನಹಳ್ಳಿ ಚೇತನ ದೇವರು, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಶಶಿಕಾಂತ ನಾಯಕ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಸುನೀಲ ಹಿರೇಮಠ, ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಶಿವಾನಂದ ಮುಡಸಿ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಆರ್.ಬಿ.ಪಾಟೀಲ, ನಿರಂಜನಗೌಡ ಪಾಟೀಲ, ಬಿ.ಎ.ಪೂಜಾರ ಇತರರಿದ್ದರು.