ಬಡವರ ಅಭಿವೃದ್ಧಿಯಲ್ಲಿ ಸಹಕಾರ ಬ್ಯಾಂಕ್​ ಪಾತ್ರ ಮುಖ್ಯ

6 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮೀಣ ಪ್ರದೇಶದ ರೈತರಿಗೆ ಮತ್ತು ಬಡ ವರ್ಗದ ಜನತೆಗೆ ಆರ್ಥಿಕ ಸಾಲ ಸೌಲಭ್ಯ ಕಲ್ಪಿಸುವಲ್ಲಿ ಸಹಕಾರ ಬ್ಯಾಂಕ್​ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಹೇಳಿದರು.
ಕೆಸಿಸಿ ಬ್ಯಾಂಕ್​ ಶಾಖೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಸಹಕಾರ ಬ್ಯಾಂಕ್​ಗಳ ಆಥಿರ್ಕ ಬಲವರ್ಧನೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಅನುದಾನ ರಾಷ್ಟ್ರೀಕೃತ ಬ್ಯಾಂಕ್​ಗಳ ಬದಲಿಗೆ ಜಿಲ್ಲಾ ಕೇಂದ್ರ ಬ್ಯಾಂಕ್​ಗಳಲ್ಲಿ ಇಡುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆಗೆ ಸಮಾಲೋಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬ್ಯಾಂಕ್​ ಆರ್ಥಿಕವಾಗಿ ಪ್ರಗತಿಯತ್ತ ಸಾಗಿದ್ದು, ಆರ್ಥಿಕವಾಗಿ ಸಬಲವಾಗಲು ಹೆಚ್ಚಾಗಿ ಕೃಷಿಯೇತರ ಸಾಲ ಸೌಲಭ್ಯ ವಿತರಿಸಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನೂ ಬಲಪಡಿಸಬೇಕು. ಸಹಕಾರ ಬ್ಯಾಂಕ್​ಗಳ ಕಾರ್ಯ ನಿರ್ವಹಣೆ ಮೇಲೆ ಆಡಳಿತ ವರ್ಗ ನಿಯಂತ್ರಣ ಹೊಂದಿರಬೇಕು. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುವ ಸೇವೆ ಒದಗಿಸಲು ಮತ್ತು ಸಹಕಾರ ಸಂಸ್ಥೆಗೆ ಯಾವುದೇ ಹಾನಿಯಾಗದಂತೆ ಆಡಳಿತ ವರ್ಗ ಸೂಕ್ತ ನಿಗಾ ವಹಿಸಬೇಕು ಎಂದರು.
ಕೆಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಬ್ಯಾಂಕಿನ ಪ್ರಗತಿಗೆ ರೂಪಿಸಿದ ಅಭಿವೃದ್ಧಿಪರ ಕಾರ್ಯ ಚಟುವಟಿಕೆಗಳನ್ನು ವಿವರಿಸಿದ ಅವರು, ಬ್ಯಾಂಕ್​ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಹೀಗಾಗಿ ಮೂರು ಜಿಲ್ಲೆಗಳ ರೈತ ಸದಸ್ಯರಿಗೆ ಕೃಷಿ ಸಂಬಂಧಿತ ಸಾಲ ಸೌಲಭ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಬ್ಯಾಂಕ್​ ನಿರ್ದೇಶಕ ಮಲ್ಲಪ್ಪ ಕಲಗುಡಿ, ಸಿ.ಎಂ.ಪಾಟೀಲ, ಜಿ.ವಿ.ಪಾಟೀಲ, ಸಿ.ಬಿ.ದೊಡ್ಡಗೌಡ್ರ, ಅಧಿಕಾರಿಗಳಾದ ಎಸ್​.ಜಿ. ಆಲದಕಟ್ಟಿ, ಬಿ.ಬಿ.ನಾಯಕ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net