

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ನಾಗರಿಕತೆ ಬೆಳೆಸುವಲ್ಲಿ ಪುಸ್ತಕದ ಪಾತ್ರ ಅಪಾರ. ಅದು ಬೌದ್ಧಿಕ ಹಕ್ಕು ಹೊಂದಿರುವ, ತೆರೆಮರೆಯಲ್ಲಿ ಅವಿಶ್ರಾಂತವಾಗಿ ಪುಸ್ತಕೋದ್ಯಮದಲ್ಲಿ ಶ್ರಮಿಸಿದವರಲ್ಲಿ ಗ್ರಂಥಪಾಲಕರ ಸೇವೆ ಅದ್ವಿತೀಯವಾಗಿದೆ ಎಂದು ಆಕಾಶವಾಣಿ ವಿಶ್ರಾಂತ ನಿರ್ದೇಶಕ ಬಸು ಬೇವಿನಗಿಡದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಪಾರ್ವತೆಮ್ಮ ಹೊಂಬಳ ದತ್ತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಂಥಗಳು ಜೀವನದ ಕನ್ನಡಿ ಕುರಿತು ಉಪನ್ಯಾಸ ನೀಡಿದರು.
ಪ್ರಾಚಿನ ಕಾಲದಲ್ಲಿ ಕಲ್ಲಿನ ಮೇಲೆ, ತಾಡೋಲೆ ಮೇಲೆ, ಮಣ್ಣಿನ ಮೇಲೆ ಬರೆಯುವುದನ್ನು ಕೇಳಿದ್ದೇವೆ. ಇದನ್ನು ಕ್ರಮಬದ್ದವಾಗಿ ಗ್ರಂಥಾಲಯ ವಿಜ್ಞಾನದಲ್ಲಿ ಹೊಸ ರೂಪ ಕೊಟ್ಟು, ಗ್ರಂಥಗಳನ್ನು ಕ್ಯಾಟಲಾಗ್ಗಳ ಮೂಲಕ ಇಡೀ ಭಾರತದಲ್ಲಿ ಸಂಚಲನ ಮೂಡಿಸಿದವರು ಡಾ. ಎಸ್.ಆರ್. ರಂಗನಾಥನ್. ಅವರು ಗ್ರಂಥಗಳು ನಮ್ಮ ಉಪಯೋಗಕ್ಕಾಗಿ ಇವೆ. ಓದುಗರ ಸಮಯ ಉಳಿಸಬೇಕು. ಗ್ರಂಥಾಲಯದಲ್ಲಿ ಓದುಗರಿಗೆ ಸುಲಭವಾಗಿ ಗ್ರಂಥ ದೊರಕುವಂತಾಗಬೇಕು. ಅದು ಮನುಷ್ಯನಿಗೆ ಬೆಳಕಿನ ದಾರಿ ತೋರಿಸುತ್ತದೆ ಎಂದು ಡಾ. ರಂಗನಾಥನ್ ಹೇಳಿಕೊಟ್ಟಿದ್ದನ್ನು ಸ್ಮರಿಸಿದರು.
ದತ್ತಿದಾನಿ ಜಿ.ಬಿ. ಹೊಂಬಳ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಕೆ. ಸವಣೂರ ಮತ್ತು ಆಕಾಶವಾಣಿ ಗ್ರಂಥಾಲಯಾಧಿಕಾರಿ ಕೆ. ಶಿವರಾಜ ಅವರನ್ನು ಸನ್ಮಾನಿಸಲಾಯಿತು.
ಸತೀಶ ತುರಮರಿ, ಶಂಕರ ಕುಂಬಿ, ಡಾ. ಧನವಂತ ಹಾಜವಗೋಳ, ನಿಂಗಣ್ಣ ಕುಂಟಿ, ಬಿ.ಎಸ್. ಶಿರೋಳ, ಸಿ.ಯು. ಬೆಳ್ಳಕ್ಕಿ, ಡಾ. ಆನಂದ ಪಾಟೀಲ, ನಾಗರಾಜ ಹಂಗರಕಿ, ಶ್ರೀನಿವಾಸ ವಾಡಪ್ಪಿ, ಎಂ.ಎಂ. ಚಿಕ್ಕಮಠ, ಡಾ. ಸುರೇಶ ಹೊರಕೇರಿ, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.