ದೇಶದ ಆರ್ಥಿಕತೆಯಲ್ಲಿ ಬ್ಯಾಂಕ್‌ಗಳ ಪಾತ್ರ ಪ್ರಮುಖ

pdb
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ದೇಶದ ಆರ್ಥಿಕತೆಯಲ್ಲಿ ಬ್ಯಾಂಕ್‌ಗಳ ಪಾತ್ರ ಪ್ರಮುಖವಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಜುಲೈನಿಂದ ಸೆಪ್ಟೆಂಬರ್ ತನಕ ಆರ್ಥಿಕ ಸೇರ್ಪಡೆ ಅಭಿಯಾನ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರದ ಜಾಗೃತಿ ಜತೆಗೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಾಮಾಜಿಕ ಭದ್ರತಾ ವಿಮಾ ಯೋಜನೆಗೊಳಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆ್ ಇಂಡಿಯಾ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್ ಗುಪ್ತ ಹೇಳಿದರು. ಬೆಳಪು ಗ್ರಾಮ ಪಂಚಾಯಿತಿಗೆ ಶುಕ್ರವಾರ ಭೇಟಿ ನೀಡಿ 3 ತಿಂಗಳ ಆರ್ಥಿಕ ಸೇರ್ಪಡೆ ಪರಿಪೂರ್ಣತೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವುದು. ಡಿಜಿಟಲ್ ಹಣ ವರ್ಗಾವಣೆ ವೇಳೆ ಆಗುವ ವಂಚನೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು. ಆರ್‌ಬಿಐ ಮಂಗಳೂರು ವಲಯ ಮುಖ್ಯಸ್ಥ ರಾಜೇಂದ್ರಕುಮಾರ್, ಉಡುಪಿ ಪ್ರಾದೇಶಿಕ ಮುಖ್ಯಸ್ಥ ಅಶೋಕ್ ಅಂಬ್ಸಾ ಭಾಂಡಗೆ, ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ಡಿಜಿಎಂ ಪಬಿತ್ರಕುಮಾರ್ ದಾಸ್, ಹರೀಶ್ ಜಿ., ಕಾಪೋರೇಟ್ ವಿಭಾಗದ ರೀಜನಲ್ ಹೆಡ್ ಚೈತನ್ಯ ಕೃಷ್ಣ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಭಟ್, ಪಿಡಿಒ ಪ್ರವೀಣ್ ಡಿಸೋಜ ಉಪಸ್ಥಿತರಿದ್ದರು. ಅಶೋಕ್ ಬಳ್ಕೂರು ವಂದಿಸಿದರು. ಅಶೋಕ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಸಂವಾದ, ಜನರಿಂದ ಅಹವಾಲು, ದೂರು ಸಲ್ಲಿಕೆ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜನಸ್ನೇಹಿ ಅಧಿಕಾರಿಗಳ ಕೊರತೆಯಿದೆ. ಹೆಚ್ಚಿನ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯಗಳ ಅಧಿಕಾರಿಗಳು, ಸಿಬ್ಬಂದಿ ಇದ್ದು, ಗ್ರಾಮೀಣ ಜನರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಪಂ ಸದಸ್ಯ ಪ್ರಕಾಶ್ ರಾವ್ ದೂರಿದರು. ಅಧಿಕಾರಿಗಳು ಉತ್ತರಿಸಿ, ಈ ಸಮಸ್ಯೆ ನಿವಾರಣೆಗೆ ಲೋಕಲ್ ಬ್ಯಾಂಕ್ ಆಫೀಸರ್ಸ್ ಸೇರ್ಪಡೆ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಹೆಚ್ಚಿನ ಸ್ಥಳೀಯರು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕಿದೆ ಎಂದರು. ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಲ ನೀಡುವುದಕ್ಕಾಗಿ ಬ್ಯಾಂಕ್‌ಗಳೇ ಏಜೆಂಟರುಗಳನ್ನು ನೇಮಿಸುತ್ತಿದೆ. ಕಲೆಕ್ಷನ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ ಎಂದು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸದಸ್ಯೆ ಸೌಮ್ಯ ಸುರೇಂದ್ರ ದೂರಿದರು. ಇದಕ್ತೆ ಉತ್ತರಿಸಿದ ಸೋನಾಲಿ ಸೇನ್, ಕಮಿಷನ್ ತೆಗೆದುಕೊಂಡು ಸಾಲ ನೀಡುವಂತಿಲ್ಲ. ಅಂತಹ ವ್ಯಕ್ತಿಗಳ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.

ಬೆಳಪು ಗ್ರಾಮದ ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ವ್ಯವಹಾರದ ಮಾಹಿತಿ ಇದೆ. 280ರಷ್ಟು ಸ್ವಸಹಾಯ ಸಂಘಗಳು ಇಲ್ಲಿವೆ. ಬ್ಯಾಂಕ್‌ಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಸಿಬ್ಬಂದಿಯೊಂದಿಗೆ ವ್ಯವಹರಿಸುವಲ್ಲಿ ಭಾಷಾ ಸಂವಹನ ತೊಂದರೆಯಾಗುತ್ತಿದೆ. ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವಲ್ಲಿ ಬ್ಯಾಂಕ್‌ಗಳು ಆಸರೆಯಾಗಬೇಕು. ಶೈಕ್ಷಣಿಕ ಸಾಲ ನೀಡುವಲ್ಲಿ ಬ್ಯಾಂಕ್ ವ್ಯವಸ್ಥಾಪಕರೂ ಮುತುವರ್ಜಿ ವಹಿಸುತ್ತಿಲ್ಲ. ಆರೋಗ್ಯ ಸುರಕ್ಷಾ ವಿಮೆ, ವಸತಿ ಯೋಜನೆಗಳ ಲಾಭವನ್ನು ಗ್ರಾಮಸ್ಥರು ಬ್ಯಾಂಕ್‌ನಿಂದ ಪಡೆಯಲು ಹಿಂಜರಿಯಬಾರದು. ದೇವಿಪ್ರಸಾದ್ ಶೆಟ್ಟಿ, ಬೆಳಪು ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net