

ಮಳವಳ್ಳಿ: ಪ್ರತಿಯೊಬ್ಬ ಮಗುವಿನ ಶೈಕ್ಷಣಿಕ ಬೆಳವಣಿಗೆಯ ಕಲಿಕೆ-ಅಳಿಕೆಯಲ್ಲಿ ತಾಯಿ ಬಹು ಮುಖ್ಯ ಪಾತ್ರ ವಹಿಸುತ್ತಾಳೆ ಎಂದು ಶಿಕ್ಷಣ ಇಲಾಖೆ ನಿವೃತ್ತ ವಿಷಯ ಪರಿವೀಕ್ಷಕ ಎಲ್.ನಂಜರಾಜು ತಿಳಿಸಿದರು.
ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಾತೃ ವಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಗವಂತ ಎಲ್ಲರಿಗೂ ಸಮಾನವಾದ ಸಾಮರ್ಥ್ಯ ನೀಡಿದ್ದಾನೆ. ಅದನ್ನು ಹಲವರು ಬಳಸಿಕೊಂಡು ಸಾಧಕರಾದರೇ, ಬಳಸಿಕೊಳ್ಳದ ವ್ಯಕ್ತಿಗಳು ಸೋಮಾರಿಗಳಾಗಿ ಸಮಾಜಕ್ಕೆ ಹೊರೆಯಾಗುತ್ತಾರೆ ಎಂದರು.
ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಸಾಧಕರಾಗಬೇಕು. ಆ ಮೂಲಕ ನಿಮ್ಮ ತಂದೆ, ತಾಯಿಗಳಿಗೆ ಸಾರ್ಥಕ ಜೀವನ ನಡೆಸಿದ್ದೇವೆ ಎಂಬ ಭಾವನೆ ಮೂಡಿಸಬೇಕು. ಆಗ ಮಾತ್ರ ನಿಮ್ಮ ಬದುಕಿಗೆ ಅರ್ಥ ದೊರೆಯುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ. ನಾಗೇಂದ್ರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಂದು ಮಗುವಿನ ಕಲಿಕೆಯಲ್ಲಿ ತಾಯಿ ಮೊದಲ ಗುರುವಾಗಿದ್ದು, ತಮ್ಮ ಮಕ್ಕಳ ತಪ್ಪುಗಳನ್ನು ತಿದ್ದಿ ತೀಡಿ ಸರಿದಾರಿಗೆ ತರುವ ಕಾಯಕ ಮಾಡುತ್ತಾಳೆ. ನಮ್ಮ ಶಾಲೆಯಲ್ಲಿ ಉತ್ತಮವಾದ ಶಿಕ್ಷಣ ಜತೆಗೆ ಸಂಸ್ಕಾರವನ್ನು ನೀಡುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಪಾಲಕರ ಸಹಕಾರ ಮುಖ್ಯ. ಮನೆಯಲ್ಲಿ ವಿದ್ಯಾರ್ಥಿಗಳು ಸರಿಯಾದ ಕಲಿಕೆಗೆ ಬೇಕಾದ ವಾತಾವರಣ ರೂಪಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ಮಾಡುವ ಮೂಲಕ ಮಾತೃ ವಂದನೆ ಸಲ್ಲಿಸಿದರು.
ಪತಾಂಜಲಿ ಯೋಗ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಶ್ಯಾಮ ದಾಸ್, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ನಿಂಗರಾಜು, ವೆಂಕಟೇಶ, ನಿಂಗಮ್ಮ, ಪೂರ್ಣಿಮಾ, ಮಾಜಿ ಅಧ್ಯಕ್ಷ ಮಹೇಶ್, ಮಮತಾ, ಅಣ್ಣಯ್ಯ, ಜಯಮ್ಮ, ಸುನಂದಾ, ಗುಂಡಪ್ಪ, ಮನುಜ, ಪ್ರಕಾಶ್, ಅನುಪಮಾ ಸೇರಿದಂತೆ ಇತರರು ಇದ್ದರು.