

ನಂದಗುಡಿ: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಎನ್.ಹೊಸಹಳ್ಳಿ ಮಾರ್ಗವಾಗಿ ಧಮೇರ್ಶ್ವರ ಕ್ಷೇತ್ರ ನಡುವಿನಪುರ, ಮೋತಕದಹಳ್ಳಿ ಮಾರ್ಗವಾಗಿ ಚಿಂತಾಮಣಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ನಂದಗುಡಿಯಿಂದ ಶಿಡ್ಲಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ಮಧ್ಯಭಾಗದಲ್ಲಿ ಬರುವ ಚೀಮಸಂದ್ರ, ಆನುಪಹಳ್ಳಿ, ಬೆಂಡಿಗನಹಳ್ಳಿ ಗ್ರಾಮಗಳು ಸೇರಿ ಅನೇಕ ಗ್ರಾಮಗಳ ರಸ್ತೆಗಳು ಡಾಂಬರೀಕರಣದಿಂದ ವಂಚಿತಗೊಂಡಿದ್ದು, ರಸ್ತೆಗುಂಡಿಗಳ ಅವಾಂತರಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಕೆಲವೇ ಕಿಲೋ ಮೀಟರ್ ದೂರಕ್ಕೆ ಕ್ರಮಿಸಬೇಕಾದರೂ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳಬೇಕಾಗಿದೆ, ರಸ್ತೆ ಗುಂಡಿಗಳನ್ನು ತಪ್ಪಿಸಿ ಸಂಚರಿಸಲು ಹರಸಾಹಸ ನಡೆಸಬೇಕಾಗಿದೆ. ಸ್ವಲ್ಪ ಆಯತಪ್ಪಿದ್ದರೂ ಬಿದ್ದು ಗಾಯಗೊಳ್ಳುವುದು ಸಾಮಾನ್ಯ ಎನ್ನುವಂತ ಸನ್ನಿವೇಶ ನಿರ್ಮಾಣವಾಗಿದೆ.
ಅನುದಾನವಿಲ್ಲ ಎಂಬ ಸಬೂಬು: ನಂದಗುಡಿ ಹೋಬಳಿಯ ಕೆಲವು ರಸ್ತೆಗಳು ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಒಳಪಡುವುದರಿಂದ ದುರಸ್ತಿಯಾಗದೆ ಹದಗೆಟ್ಟವೆ ಎಂಬ ಆರೋಪ ಕೇಳಿಬರುತ್ತಿದೆ. ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಹಾಗೂ ಗ್ರಾಮಾಂತರ ರಸ್ತೆಗಳ ದುರಸ್ತಿಗೆ ಅನುದಾನ ಸಿಗುತ್ತಿಲ್ಲ ಎಂಬ ಸಿದ್ಧ ಉತ್ತರ ಕೇಳಿಬರುತ್ತಲೇ ಇದೆ. ಅನುದಾನ ಬಂದ ಕೂಡಲೇ ರಸ್ತೆ ದುರಸ್ತಿ ಮಾಡಿಸಲಾಗುವುದು ಎಂಬ ಜನಪ್ರತಿನಿಧಿಗಳ ಆಶ್ವಾಸನೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.
ಕೆರೆಗಳಂತಾದ ರಸ್ತೆಗಳು: ಮಳೆಗಾಲ ಬಂತೆಂದರೆ ರಸ್ತೆಗಳ ನಿಜವಾದ ಬಣ್ಣ ಬಯಲಾಗುತ್ತದೆ. ರಸ್ತೆಯಲ್ಲಿ ಡಾಂಬರು ಎಲ್ಲಿ ಉಳಿದಿದೆ ಎಂದು ಹುಡುಕಬೇಕಾಗಿದೆ, ಮಳೆಯ ನೀರು ಗುಂಡಿಗಳಲ್ಲಿ ಶೇಖರಣೆಯಾಗಿ ಸಣ್ಣಸಣ್ಣ ಕೆರೆಗಳಂತೆ ಭಾಸವಾಗುತ್ತದೆ ದ್ವಿಚಕ್ರವಾಹನ ಸವಾರರು ಗುಂಡಿಯೊಳಗೆ ಬೈಕ್ ಇಳಿಸಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಪ್ರತಿನಿತ್ಯ ರಸ್ತೆಯಲ್ಲಿ ಸರ್ಕಸ್ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಸ್ಥಳಿಯರು ಅಲವತ್ತುಗೊಳ್ಳುತ್ತಿದ್ದಾರೆ.
ಬಲಿಗಾಗಿ ಕಾಯುತ್ತಿರುವ ದಾರಿಗಳು: ನಂದಗುಡಿಯಿಂದ ಚೀಮಸಂದ್ರವರೆಗೆ ಉತ್ತಮ ರಸ್ತೆ ಇದೆ. ಆದರೆ ಅಲ್ಲಿಂದ ಮುಂದಕ್ಕೆ ಸಾಗಿದರೆ ಅನುಪಹಳ್ಳಿ, ಬೆಂಡಿಗನಹಳ್ಳಿ ದಾರಿ ಅಪಾಯಕಾರಿಯಾಗಿದೆ. ಕಡಿದಾದ ಇಳಿಜಾರು, ಗುಂಡಿಗಳು ಸೇರಿ ಸಂಚಾರಕ್ಕೆ ಸವಾಲು ಎಸೆಯುತ್ತಿವೆ. ಹಲವು ವರ್ಷಗಳಿಂದ ಡಾಂಬರು ಕಾಣದ ರಸ್ತೆಗಳು ಬಲಿಗಾಗಿ ಬಾಯ್ತರೆದಿರುವಂತೆ ಭಾಸವಾಗುತ್ತದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕ್ರಷರ್ ಲಾರಿಗಳ ಸಮಸ್ಯೆ: ಇಲ್ಲಿಯ ಅನೇಕ ಕಡೆ ಕಲ್ಲು ಕ್ರಷರ್ಗಳು ಸದ್ದು ಮಾಡುತ್ತಿವೆ. ಇವುಗಳಲ್ಲಿನ ಕಲ್ಲು, ಧೂಳನ್ನು ಹೊತ್ತು ನಿತ್ಯ ಹತ್ತಾರು ಲಾರಿಗಳು ಸಂಚರಿಸುತ್ತವೆ. ಇವುಗಳ ಭಾರಕ್ಕೆ ನಲುಗಿ ಹಳ್ಳಿಗಳ ರಸ್ತೆಗಳು ಸ್ವರೂಪವನ್ನೇ ಕಳೆದುಕೊಂಡಿವೆ. ನಿತ್ಯ ಹತ್ತಾರು ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಅವುಗಳ ನಡುವೆ ದ್ವಿಚಕ್ರ ವಾಹನಗಳಲ್ಲಿ ತೆರಳಲು ಹೆದರಿಕೆಯಾಗುತ್ತದೆ ಎಂದು ವಾಹನ ಸವಾರರು ಆತಂಕ ತೋಡಿಕೊಂಡಿದ್ದಾರೆ.
ಸ್ಥಳಿಯ ಪ್ರತಿನಿಧಿಗಳು, ರಾಜಕೀಯ ಮುಖಂಡರಿದ್ದರೂ ಇದೇ ರಸ್ತೆಯಲ್ಲಿ ಕಣ್ಣುಮುಚ್ಚಿಕೊಂಡು ಓಡಾಡುತ್ತಿದ್ದಾರೆ ಅನಿಸುತ್ತದೆ. ನಾವಂತೂ ಈ ರಸ್ತೆಯಲ್ಲಿ ಓಡಾಡದೆ ಮನೆಯಲ್ಲಿ ಇರುವ ಪರಿಸ್ಥಿತಿ ಬಂದಿದೆ. ದೊಡ್ಡ ದೊಡ್ಡ ಗುಂಡಿಗಳು ಬಿದ್ದರೂ ಯಾವ ಅಧಿಕಾರಿಯಾಗಲಿ, ಮುಖಂಡರಾಗಲಿ ಗಮನ ವಹಿಸದೆ ಇರುವುದು ವಿಪರ್ಯಾಸ. - ನಾರಾಯಣಪ್ಪ ಹಿರಿಯ ನಾಗರಿಕ ಶಾಲಾ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಈ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ, ಎಲ್ಲಿ ರಸ್ತೆಗುಂಡಿಗಳಲ್ಲಿ ವಾಹನ ಚಕ್ರ ಸಿಲುಕುತ್ತದೋ ಎಲ್ಲಿ ಅಪಘಾತವಾಗುತ್ತದೋ ಎಂಬ ಆತಂಕದಲ್ಲೇ ಪ್ರತಿನಿತ್ಯ ವಾಹನ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ. - ರಾಜಪ್ಪ ಖಾಸಗಿ ಶಾಲೆ ಚಾಲಕ ಎನ್.ಹೊಸಹಳ್ಳಿ ಮಾರ್ಗವಾಗಿ ಧಮೇರ್ಶ್ವರ ಕ್ಷೇತ್ರ ನಡುವಿನಪುರ, ಕೊಂಡ್ರಹಳ್ಳಿ ಮೋತಕದಹಳ್ಳಿಯಿಂದ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. - ಎಇಇ ಪ್ರಕಾಶ್ ಪಿಡಬ್ಲ್ಯೂಡಿ ಹೊಸಕೋಟೆ.