

ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗರ ಕುಟುಂಬಗಳಿಗೆ ಸರ್ಕಾರ ತಲಾ 50 ಲಕ್ಷ ರೂ. ಪರಿಹಾರ ಘೋಷಿಸಬೇಕು ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಪತ್ರ ಕೊಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು.
ಮೇ 18ರಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಮಂಜುನಾಥ ರಾವ್ ಮನೆಗೆ ಭೇಟಿ ಕೊಟ್ಟು ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಬೇಕು. 10 ಲಕ್ಷ ರೂ. ಬದಲು 50 ಲಕ್ಷ ರೂ. ನೀಡಬೇಕು. ಪತ್ನಿ ಅಥವಾ ಪುತ್ರನಿಗೆ ಸರ್ಕಾರಿ ನೌಕರಿ ಆದೇಶ ಪತ್ರ ನೀಡಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸರ್ಕಾರ ಆಯವ್ಯಯದಲ್ಲಿ ಈ ಬಾರಿ ಜಿಲ್ಲೆಗೆ ಏನೂ ಕೊಟ್ಟಿಲ್ಲ. ಯಾವುದೇ ಕಾಮಗಾರಿ ಇಲ್ಲದೆ ಅಭಿವೃದ್ಧಿ ಶೂನ್ಯವಾಗಿದೆ. ಹಾಗಾಗಿ ಎಸ್‌ಪಿ ಕಚೇರಿ ಆವರಣದಲ್ಲಿನ ಖಾಲಿ ಜಾಗದಲ್ಲಿ ನೂತನ ಜಿಲ್ಲಾಡಳಿತ ಭವನಕ್ಕೆ (ಡಿಸಿ, ಎಸ್‌ಪಿ, ಜಿಪಂ ಕಚೇರಿಗಳು) ನಿರ್ಮಾಣಕ್ಕೆ 200 ಕೋಟಿ ರೂ.ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ತಕ್ಷಣ ಆ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲು ಆದೇಶಿಸಬೇಕು ಎಂದು ಸಿಎಂಗೆ ಮನವಿ ಮಾಡಿದರು.
ಬಾಲರಾಜ ರಸ್ತೆಯಲ್ಲಿ 2017ರಲ್ಲೇ ಆರಂಭವಾದ ಡಿ.ದೇವರಾಜ್ ಅರಸ್ ಭವನದ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು, ಕೊರತೆ ಬಿದ್ದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ ಭವನ ಲೋಕಾರ್ಪಣೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಬೊಮ್ಮನಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಕಾರ್ಯರೂಪಕ್ಕೆ ಬರಲಿಲ್ಲ. 24*7 ನೀರು ಸರಬರಾಜು ಇನ್ನೂ ಜಾರಿಯಾಗಿಲ್ಲ. ರಸ್ತೆಗಳೆಲ್ಲ ಗುಂಡಿಮಯವಾಗಿವೆ. ದುರಸ್ತಿಗೂ ಹಣವಿಲ್ಲ ಎಂದು ದೂರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ ಗೋಪಾಲ್, ಕಾರ್ಯಾಧ್ಯಕ್ಷ ರಾಮಕೃಷ್ಣ, ನಗರ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಸಂಗಯ್ಯ, ಉಮಾಶಂಕರ್ ಉಪಾಧ್ಯ, ಕೃಷ್ಣಮೂರ್ತಿ, ನರಸಿಂಹ ಗಂಧದಮನೆ, ಮಾಧವಮೂರ್ತಿ, ರಮೇಶ್, ರಘು, ಮಂಜು, ಸಂಜಯ್ ಕಶ್ಯಪ್, ದಯಾನಂದ್, ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.