

ಸುಭಾಸ ಧೂಪದಹೊಂಡ ಕಾರವಾರ
ಬೇಡ್ತಿ ಹೊಳೆಯ ನೀರಿನ ಮೇಲೆ ಸರ್ಕಾರದ ಕಣ್ಣು 70ರ ದಶಕದಿಂದಲೂ ಇದೆ. ಆದರೆ, ಸ್ಥಳೀಯರ ನಿರಂತರ ಹೋರಾಟವು ಕೊಳ್ಳವನ್ನು ಯಥಾಸ್ಥಿತಿಯಲ್ಲಿ ಇರುವಂತೆ ಮಾಡಿದೆ.
ಹೌದು, 1970ರ ದಶಕದಲ್ಲೇ ಬೇಡ್ತಿ ಹಳ್ಳಕ್ಕೆ ಮಾಗೋಡು ಸಮೀಪ ಅಣೆಕಟ್ಟು ನಿರ್ಮಾಣ ಮಾಡಿ ಜಲವಿದ್ಯುತ್ ತಯಾರಿಸಲು ಯೋಜನೆ ಸಿದ್ಧವಾಗಿತ್ತು. ಸರ್ವೆ ಕಾರ್ಯವೂ ನಡೆದಿತ್ತು. 1979ರಲ್ಲಿ ಶಿರಸಿಯ ಟಿಎಸ್ಎಸ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವು ಅಂದು ಬೇಡ್ತಿ ಹೊಳೆ ಉಳಿಸಲು ದೊಡ್ಡ ಮಟ್ಟದ ಪರಿಸರ ಹೋರಾಟಕ್ಕೆ ನಾಂದಿಯಾಯಿತು.
ಅಂದಿನ ಶಾಸಕಿ ಅನಸೂಯಾ ಶರ್ಮಾ ಅವರು ಯೋಜನೆಯ ಸಾಧಕ ಬಾಧಗಳ ಅಧ್ಯಯನಕ್ಕೆ ಪರಿಸರ ವಿಜ್ಞಾನಿ ಡಾ.ಮಾಧವ ಗಾಡ್ಗೀಳ ಅವರನ್ನು ಕರೆತಂದಿದ್ದರು. ಡಾ.ಶಿವರಾಮ ಕಾರಂತ, ಸುಂದರಲಾಲ್ ಬಹುಗುಣ ಮುಂತಾದ ಸಾಕಷ್ಟು ಪರಿಸರ ಪ್ರಿಯರು ಯೋಜನೆಯಿಂದಾಗುವ ನಷ್ಟದ ಬಗ್ಗೆ ವಿವರ ಮಂಡಿಸಿದ್ದರು. ಅಂದಿನ ಸಮಾವೇಶದ ನಂತರ ಜನಾಂದೋಲನ ರೂಪುಗೊಂಡಿತು ಎಂದು ಹಿಂದಿನ ಘಟನೆಗಳನ್ನು ಗಡಿಕೈ ನಾರಾಯಣ ಹೆಗಡೆ ನೆನಪಿಸಿಕೊಳ್ಳುತ್ತಾರೆ.
ಆದರೆ, 70ರ ದಶಕದಲ್ಲಿ ಬಂದಾದ ಯೋಜನೆ 1990ರಲ್ಲಿ ಜಿಲ್ಲೆಯಲ್ಲಿ ಮತ್ತೆ ಮುನ್ನೆಲೆಗೆ ಬಂತು. ಆಗ ಬೇಡ್ತಿ ಜತೆ ಅಘನಾಶಿನಿ ನದಿಯಲ್ಲಿ ಅಣೆಕಟ್ಟೆ ನಿರ್ವಣದ ವಿಚಾರವೂ ಸೇರಿತ್ತು. ಕರ್ನಾಟಕ ವಿದ್ಯುತ್ ನಿಗಮವು ಮಾಗೋಡಿನಲ್ಲಿ ಅಣೆಕಟ್ಟೆ ನಿರ್ವಣಕ್ಕೆ ಎಲ್ಲ ತಯಾರಿ ನಡೆಸಿತ್ತು. ಕೆಪಿಸಿ ಉದ್ಯೋಗಿಗಳು ಬಂದು ಬೀಡು ಬಿಟ್ಟಿದ್ದರು. ಆಗ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹೋರಾಟದ ನೇತೃತ್ವ ವಹಿಸಿದ್ದರು. 1992 ಸೆಪ್ಟೆಂಬರ್ 14 ರಂದು ಸಾವಿರಾರು ಜನರ ಜತೆಗೂಡಿ ಯಲ್ಲಾಪುರ ತಾಲೂಕಿನ ಮಾಗೋಡಿನವರೆಗೆ ಪಾದಯಾತ್ರೆ ನಡೆಸಿದ್ದರು. ಸೆ. 18ರಂದು ಮಾಗೋಡಿನಲ್ಲಿ ಬೃಹತ್ ಸಮಾವೇಶ ನಡೆಯಿತು. ಆ ಬೃಹತ್ ಹೋರಾಟದ ಬಳಿಕ ಯೋಜನೆ ತಾತ್ಕಾಲಿಕವಾಗಿ ಬಂದಾಗಿತ್ತು.
1996-97 ರಲ್ಲಿ ಗಂಗಾವಳಿಯಲ್ಲಿ (ಬೇಡ್ತಿ ನದಿಗೆ ಕರಾವಳಿಯಲ್ಲಿ ಗಂಗಾವಳಿ ಎಂಬ ಹೆಸರಿದೆ) ಮಿನಿ ಹೈಡಲ್ ಡ್ಯಾಂ ಯೋಜನೆಗಳನ್ನು ಖಾಸಗಿ ಸಂಸ್ಥೆಗಳ ಮೂಲಕ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಆಗಲೂ ಅಗಸೂರಿನಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಿ ಯೋಜನೆಯನ್ನು ಹಿಮ್ಮೆಟ್ಟಿಸಲಾಗಿತ್ತು.
1999ರಲ್ಲಿ ಯೋಜನೆ ಸ್ವರೂಪ ಬದಲಿಸಿ ಬೇಡ್ತಿ ಹಳ್ಳಕ್ಕೆ ಅಣೆಕಟ್ಟು ನಿರ್ವಿುಸಿ ತಟ್ಟಿಹಳ್ಳ ಡ್ಯಾಂಗೆ ಸೇರಿಸಲು ಯೋಜಿಸಲಾಗಿತ್ತು. ನವೆಂಬರ್ 2000ನೇ ಸಾಲಿನಲ್ಲಿ ಸೋಂದಾ ಶ್ರೀಗಳು ಮಾಗೋಡಿನಲ್ಲಿ ಮತ್ತೆ ಸಮಾವೇಶ ನಡೆಸಿ ಯೋಜನೆಯನ್ನು ಹಿಮ್ಮೆಟ್ಟಿಸಿದ್ದರು.
2001ರಲ್ಲಿ ಕೇಂದ್ರ ಸರ್ಕಾರ ಯೋಜಿಸಿದ ಗಂಗಾ-ಕಾವೇರಿ ಸೇರಿ ದೇಶದ ಪ್ರಮುಖ ನದಿಗಳ ಜೋಡಣೆಯ ಪ್ರಸ್ತಾಪದಲ್ಲಿ ಮತ್ತೆ ಬೇಡ್ತಿ ಹೆಸರು ಕೇಳಿಬಂತು. ಎನ್ಡಬ್ಲ್ಯುಡಿಎ ಈ ಸಂಬಂಧ ಯೋಜನಾ ವರದಿಯನ್ನೂ ತಯಾರಿಸಿತು. ಈ ಸಂದರ್ಭದಲ್ಲೂ ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಮತ್ತೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಪ್ರತಿಭಟನೆ ನಡೆಸಲಾಗಿತ್ತು. 2016 ರಲ್ಲಿ ಮತ್ತೆ ನದಿ ಜೋಡಣೆಯ ವಿಚಾರ ಚರ್ಚೆಗೆ ಬಂದಿತ್ತು.
ಅಣೆಕಟ್ಟು ನಿರ್ವಣಕ್ಕಿಲ್ಲ ಅವಕಾಶ? : ಸದ್ಯ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿರುವ ಅನಂತ ಹೆಗಡೆ ಅಶೀಸರ ಬೇಡ್ತಿ ಕೊಳ್ಳ ಸಂರಕ್ಷಣೆಯ ಹೋರಾಟದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಅವರು ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿದ್ದಾಗ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದರು. ಪರಿಣಾಮ ಸರ್ಕಾರವು ಬೇಡ್ತಿ ಅಥವಾ ಶಾಲ್ಮಲಾ ನದಿ ಕೊಳ್ಳದ ಇಕ್ಕೆಲದಲ್ಲಿ 15.76 ಕಿಮೀ ವ್ಯಾಪ್ತಿಯ 489 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿ ಕಾಯ್ದೆಯಡಿ ಸಂರಕ್ಷಿತ ಪ್ರದೇಶ ಎಂದು ಘೊಷಿಸಿದೆ. ಇಲ್ಲಿ ಅಣೆಕಟ್ಟುಗಳು ಹಾಗೂ ಬೃಹತ್ ಗಣಿಗಾರಿಕೆ ಪ್ರಾರಂಭಿಸಲು ಅವಕಾಶವಿಲ್ಲ ಎನ್ನುತ್ತದೆ ಕಾನೂನು.