

ಅಳ್ನಾವರ: ಪಟ್ಟಣದಿಂದ ಕಾಶೆನಟ್ಟಿ ಗ್ರಾಮಕ್ಕೆ ತೆರಳುವ ರಸ್ತೆ ತುಂಬ ತೆಗ್ಗು-ಗುಂಡಿಗಳು ಬಿದ್ದು ಸಂಚಾರಕ್ಕೆ ಸಂಕಟ ಅನುಭವಿಸುವಂತಾಗಿದೆ.
ಪಟ್ಟಣದ ಬಹುತೇಕ ರೈತರ ಹೊಲಗಳು ಈ ಮಾರ್ಗದಲ್ಲಿವೆ. ಹೀಗಾಗಿ, ಹೆಚ್ಚಿನ ಸಂಖ್ಯೆಯ ರೈತರು ಓಡಾಡುತ್ತಾರೆ.
ಪಟ್ಟಣದಿಂದ 2 ಕಿಮೀ ಅಂತರದಲ್ಲಿರುವ ಆಶ್ರಯ ಕಾಲನಿ ನಿವಾಸಿಗಳಿಗೆ ಮತ್ತು ಕಾಶೆನೆಟ್ಟಿಯ ಗ್ರಾಮಸ್ಥರಿಗೆ ಮುಖ್ಯ ಮಾರ್ಗವಾಗಿದೆ.
2017ರಲ್ಲಿ ಡಾಂಬರ್ ರಸ್ತೆ ನಿರ್ವಿುಸಲಾಗಿದೆ. ಕೆಲ ವರ್ಷಗಳ ಕಾಲ ಅಲ್ಲಲ್ಲಿ ದುರಸ್ತಿ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸಂಪೂರ್ಣವಾಗಿ ಕಿತ್ತುಹೋಗಿ ನಿತ್ಯವೂ ಜನರು ಸಂಕಟ ಪಡುವಂತಾಗಿದೆ.
ಈ ರಸ್ತೆಯಲ್ಲಿ ಹೊರಟರೆ ಜನರಿಗೆ ಗುಡ್ಡುಗಾಡಿನಲ್ಲಿ ಸಂಚರಿಸಿದ ಅನುಭವ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆ ಹಲವು ಬಾರಿ ನಡೆದಿದೆ.
ಕಾರು ಮತ್ತಿತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಸಮಸ್ಯೆ ಅನುಭವಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಬರುವ ರಸ್ತೆ ಕೆಟ್ಟು ಹೋಗಿದೆ. ಇದರಿಂದ ನಿತ್ಯವೂ ಪರದಾಡಬೇಕಾಗಿದೆ. ರಸ್ತೆಯ ಮರು ನಿರ್ವಣಕ್ಕೆ ಮುಂದಾಗದಿದ್ದರೆ ಹೋರಾಟ ಮಾಡಬೇಕಾಗುತ್ತದೆ.| ಅದೃಶ್ಯ ನರಗುಂದ ಕಾಶೆನಟ್ಟಿ ಗ್ರಾಮಸ್ಥ