

ಬಿ.ಎಲ್.ಲಕ್ಷ್ಮಣ್ ಬೇಲೂರು
ಮೊದಲೇ ಗುಂಡಿಗಳಿಂದ ಕೂಡಿದ್ದ ತಾಲೂಕಿನ ಮೈಲಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಈ ಬಾರಿಯ ಮಳೆಗಾಲದಲ್ಲಿ ಮತ್ತಷ್ಟು ದೊಡ್ಡ ಗುಂಡಿಗಳಾಗಿ ಸಾರ್ವಜನಿಕರು, ವಾಹನಗಳು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಉತ್ತಮ ರಸ್ತೆ ನಿರ್ಮಿಸಲು ಮುಂದಾಗಬೇಕೆಂಬುದು ಮೈಲಹಳ್ಳಿ ಗ್ರಾಮಸ್ಥರ ಆಗ್ರಹವಾಗಿದೆ.
ಬೇಲೂರು ತಾಲೂಕು ಕೇಂದ್ರದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಮೈಲಹಳ್ಳಿ ಗ್ರಾಮವು ತೋಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಈ ಗ್ರಾಮದ ಮೂಲಕವೇ ಸುಳ್ಳಕ್ಕಿ, ಕಂದಾವರ ಸೇರಿದಂತೆ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಪರಿಶಿಷ್ಟ ಜಾತಿ, ಪಂಗಡದ ಸಮುದಾಯಕ್ಕೆ ಸೇರಿದ ಜನರು ವಾಸಿಸುತ್ತಿದ್ದಾರೆ. ಈ ಗ್ರಾಮಕ್ಕೆ ತೆರಳಲು ಇರುವ ಒಂದೇ ರಸ್ತೆ ಹತ್ತು ವರ್ಷಗಳಿಂದಲೂ ಅಭಿವೃದ್ಧಿ ಕಾಣದೆ ಹೆಜ್ಜೆ ಹೆಜ್ಜೆಗೂ ಗುಂಡಿಗಳಿಂದ ತುಂಬಿದೆ.
ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಗ್ರಾಮ ಸಭೆ, ಜನ ಸಂಪರ್ಕ ಸಭೆಗಳಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೈಲಹಳ್ಳಿ ಗ್ರಾಮದಿಂದ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ವಿವಿಧ ಕೆಲಸಗಳಿಗೆ ತೆರಳುವ ಜನರು, ಕೂಲಿ ಕಾರ್ಮಿಕರು ನಡೆದುಕೊಂಡೇ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯುವುದು ಕಷ್ಟ ಸಾಧ್ಯವಾಗಿದೆ.
ತುರ್ತು ಸಂದರ್ಭಗಳಲ್ಲಿ ಆಟೋ ಕೂಡ ಗ್ರಾಮಕ್ಕೆ ಬಾರದ ಪರಿಸ್ಥಿತಿ ಇದೆ. ಬಂದರೂ ದುಪ್ಪಟ್ಟು ಹಣ ನೀಡುವ ಪರಿಸ್ಥಿತಿ ಇದೆ. ಒಮ್ಮೆ ಈ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ವಾಹನ ನಿಶ್ಚಿತವಾಗಿ ಗ್ಯಾರೇಜಿಗೆ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕರೇ ಹೆಚ್ಚಾಗಿ ನೆಲೆಸಿರುವುದರಿಂದ ನಿರ್ಲಕ್ಷೃವಹಿಸಿದ್ದಾರೆ ಎಂಬ ದೂರು ಕೂಡ ಇದೆ.