

ಅವಿನಾಶ್ ಜೈನಹಳ್ಳಿ ಮೈಸೂರು
ಕಿತ್ತು ಬಂದಿರುವ ಡಾಂಬರ್.. ರಸ್ತೆ ತುಂಬೆಲ್ಲ ಕಲ್ಲುಗಳು, ಗುಂಡಿಗಳು… ಸಂಚರಿಸಿದರೆ ಮೈ ತುಂಬ ಧೂಳು….!
ಇದು ಯಾವುದೋ ಕುಗ್ರಾಮದಲ್ಲಿ ವರ್ಷಗಟ್ಟಲೇ ಅಭಿವೃದ್ಧಿ ಕಾಣದ ರಸ್ತೆಯ ಚಿತ್ರಣವೇನೂ ಅಲ್ಲ. ಬದಲಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪ್ರತಿಷ್ಠಿತ ಶ್ರೀ ಸುಬ್ರಹ್ಮಣ್ಯನಗರ ಬಡಾವಣೆಯ ಚಿತ್ರಣ..!
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಬಡಾವಣೆಯು ಹೂಟಗಳ್ಳಿ ನಗರಸಭೆ ವ್ಯಾಪ್ತಿಗೆ ಸೇರುತ್ತದೆ. ಬಡಾವಣೆಯ ರಸ್ತೆಗೆ ಡಾಂಬರೀಕರಣ ನಡೆದು ವರ್ಷಗಳೇ ಕಳೆದಿವೆ. ಸದ್ಯ ಬಡಾವಣೆಯ ಎಲ್ಲ ರಸ್ತೆಗಳು ಹಾಳಾಗಿದ್ದು, ಬಡಾವಣೆ ನಿವಾಸಿಗಳು ಸೇರಿದಂತೆ ಸದರಿ ರಸ್ತೆಯಲ್ಲಿ ಸಂಚರಿಸುವ ಸುತ್ತಮುತ್ತಲ ಬಡಾವಣೆಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬಡಾವಣೆಯಲ್ಲಿ ರಸ್ತೆ ಮಾತ್ರವಲ್ಲದೆ, ಒಳಚರಂಡಿ ವ್ಯವಸ್ಥೆಯೂ ಸರಿ ಇಲ್ಲ. ಮಳೆ ಬಂದಾಗಲೆಲ್ಲ ನೀರು ರಸ್ತೆಯಲ್ಲೇ ಹರಿಯುತ್ತದೆ.
ಶ್ರೀ ಸುಬ್ರಹ್ಮಣ್ಯನಗರ ಬಡಾವಣೆಯು ವಿಜಯನಗರ 3ನೇ ಹಂತ ಮತ್ತು ಹುಣಸೂರು ರಸ್ತೆ ನಡುವೆ ಇದೆ. ಗುಂಡಿ ಬಿದ್ದು ಹಾಳಾಗಿರುವ ರಸ್ತೆಗೆ ಮರು ಡಾಂಬರೀಕರಣ ಮಾಡುವುದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮರೆತ್ತಿದ್ದಾರೆ. ಹೀಗಾಗಿ ರಸ್ತೆಯಲ್ಲಿ ಕಲ್ಲುಗಳು ಹರಡಿಕೊಂಡಿದೆ, ಗುಂಡಿಗಳು ಸೃಷ್ಟಿಯಾಗಿವೆ. ರಸ್ತೆಯ ಅರ್ಧ ಭಾಗ ಡಾಂಬರ್ ಕಿತ್ತು ಬಂದಿರುವುದರಿಂದ ವಾಹನಗಳು ಸಂಚರಿಸುವಾಗ ಧೂಳು ಏಳುತ್ತಿದ್ದು, ವಾಹನ ಸವಾರರಿಗೆ ನಿತ್ಯ ಧೂಳಿನ ಅಭಿಷೇಕವಾಗುತ್ತಿದೆ. ಬಡಾವಣೆಯ ನಿವಾಸಿಗಳು ಕೂಡ ನಿತ್ಯ ಧೂಳು ಕುಡಿಯುವಂತಾಗಿದೆ. ಇದರಿಂದ ಬಡಾವಣೆಯ ಅನೇಕರನ್ನು ನಾನಾ ರೋಗ-ರುಜಿನಗಳು ಕಾಡುತ್ತಿವೆ.
ವಿಜಯನಗರ 3ನೇ ಹಂತ, ಹಿನಕಲ್, ವಿಜಯನಗರ 1 ಮತ್ತು 2 ನೇ ಹಂತ, ಹುಣಸೂರು ರಸ್ತೆ, ಹೂಟಗಳ್ಳಿ ಮಾರ್ಗವಾಗಿ ನೇರ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಬದಿಯಲ್ಲೇ ನಗರದ ಪ್ರತಿಷ್ಠಿತ ಹೋಟೆಲ್‌ಗಳು ಇವೆ. ನಿತ್ಯ ಈ ರಸ್ತೆ ಮೂಲಕವೇ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆಗೆ ಡಾಂಬರೀಕರಣ ಮಾಡದಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ನಮ್ಮ ಬಡಾವಣೆ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಬಡಾವಣೆಯ ಎಲ್ಲ ರಸ್ತೆಗಳು ಹಾಳಾಗಿವೆ. ಒಳಚರಂಡಿ ವ್ಯವಸ್ಥೆಯು ಸರಿ ಇಲ್ಲ. ಈ ಸಂಬಂಧ ಹೂಟಗಳ್ಳಿ ನಗರಸಭೆ ಅಧಿಕಾರಿಗಳಿಗೆ ಹಾಗೂ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ ಎಂದು ಬಡಾವಣೆಯ ನಿವಾಸಿ ಅಶೋಕ್ ದೂರಿದರು.
ನಮ್ಮ ಬಡಾವಣೆಗೆ ಬೋರ್‌ವೆಲ್ ನೀರನ್ನು ಪೂರೈಸಲಾಗುತ್ತದೆ. ಇದರಿಂದ ಅನೇಕರಿಗೆ ನಾನಾ ಸಮಸ್ಯೆಯಾಗಿದೆ. ನಮ್ಮ ಬಡಾವಣೆಗೂ ಕಾವೇರಿ ನೀರು ಪೂರೈಸಬೇಕು ಎಂದು ಅವರು ಒತ್ತಾಯಿಸಿದರು.