ಹೀಲಲಿಗೆ- ಸಿಂಗೇನ ಅಗ್ರಹಾರ ರಸ್ತೆ ಅವ್ಯವಸ್ಥೆ

The road is full of potholes.
near anekal road is full of potholes.
Published on

ಗುಂಡಿಗಳಿಂದ ಕೂಡಿರುವ ಮಾರ್ಗಕ್ಕೆ ಮುಕ್ತಿ ನೀಡಲು ಅಧಿಕಾರಿಗಳ ಹಿಂದೇಟು

ವಾಹನ ಸವಾರರು ಹೈರಾಣ

ವಿಶೇಷ ವರದಿ ಆನೇಕಲ್
ತಾಲೂಕಿನ ಚಂದಾಪುರದ ಹೀಲಲಿಗೆ ಹಾಗೂ ಸಿಂಗೇನ ಅಗ್ರಹಾರದ ಎಪಿಎಂಸಿ ಮಾರುಕಟ್ಟೆವರೆಗಿನ ಮೂರು ಕಿಲೋಮೀಟರ್ ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿದೆ.
ಪ್ರತಿಷ್ಠಿತ ಹಣ್ಣಿನ ಮಾರುಕಟ್ಟೆ ಇದ್ದರೂ ರಸ್ತೆಯಲ್ಲಿ ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಳ್ಳುವುದು ಸಾಮಾನ್ಯವಾಗಿದೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಇದೇ ರಸ್ತೆಯಲ್ಲಿ ಸಾಗಬೇಕಿದೆ. ರಸ್ತೆಯಲ್ಲಿ ಪ್ರತಿಷ್ಠಿತ ಶಾಲಾ ಕಾಲೇಜುಗಳು ಇದ್ದರೂ ರಸ್ತೆ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆ ಬಂದಾಗ ಗುಂಡಿಗಳಲ್ಲಿ ವಾಹನ ಸವಾರರು ಸಿಲುಕಿ ನರಳಾಡಬೇಕಾದ ಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ ಗುಂಡಿ ಮುಚ್ಚುವ ಕೆಲಸ ಕೂಡ ಮಾಡಿಲ್ಲ ಎಂದು ಸ್ಥಳೀಯರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಇಲ್ಲದ ವೇಳೆಯಲ್ಲಿ ರಸ್ತೆಯಿಡೀ ಧೂಳಿನಿಂದ ಕೂಡಿರುತ್ತದೆ. ಮುಂದೆ ಹೋಗುವ ವಾಹನ ಹಿಂದಿನ ವಾಹನಗಳ ಚಾಲಕನಿಗೆ ಕಾಣಿಸದೆ ಸಾಕಷ್ಟು ಬಾರಿ ಅಪಘಾತಗಳು ಸಂಭವಿಸಿವೆ. ದ್ವಿಚಕ್ರವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೆ ತೊಂದರೆಪಡುತ್ತಿದ್ದಾರೆ. ಪ್ರತಿಷ್ಠಿತ ಐಟಿ ಸಿಟಿ ಎಲೆಕ್ಟ್ರಾನಿಕ್ ಸಿಟಿಗೂ ಇದೇ ರಸ್ತೆ ಮಾರ್ಗವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಆದರೂ ರಸ್ತೆ ಅಭಿವೃದ್ಧಿಗೊಳಿಸುವ ಕಾರ್ಯ ಈವರೆಗೆ ಆಗದೇ ಇರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿ ಮೂರು ವರ್ಷಗಳೇ ಕಳೆದಿವೆ. ಮಳೆ ಬಂದಾಗ ಕೆಸರು ತುಂಬಿ ಬಿಸಿಲು ಬಂದಾಗ ಧೂಳಿನಲ್ಲಿ ಓಡಾಡುವ ಪರಿಸ್ಥಿತಿ ಇಲ್ಲಿನವರದ್ದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಫೋಟೋ ಇಟ್ಟು ನಾವು ಪೂಜಿಸುತ್ತೇವೆ.
ಪ್ರಮೋದ್, ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net