

ಮುಂಡಗೋಡ: ತಾಲೂಕಿನ ಕಲಕೇರಿಯಿಂದ ಸುಳ್ಳಳ್ಳಿಗೆ ಹೋಗುವ ರಸ್ತೆಗೆ ನಿರ್ವಿುಸಿದ್ದ ಸೇತುವೆಯ ಪಕ್ಕದ ರಸ್ತೆ ಮಳೆಗೆ ಬುಧವಾರ ಕುಸಿದಿದ್ದು ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಕಲಕೇರಿ ಗ್ರಾಮದ ಸನಿಹದ ಹಳ್ಳಕ್ಕೆ ನೂತನವಾದ ಸೇತುವೆಯನ್ನು ನಿರ್ವಿುಸಲಾಗಿದೆ. ಬೇಸಿಗೆಯಲ್ಲಿ ಆರಂಭವಾಗಿದ್ದ ಕಾಮಗಾರಿ ಇತ್ತೀಚೆಗೆ ಮುಕ್ತಾಯವಾಗಿತ್ತು.
ಆದರೆ ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಸೇತುವೆಯ ಪಕ್ಕದಲ್ಲಿನ ರಸ್ತೆ ಕುಸಿದಿದ್ದು ಇದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿವೆ. ಬೈಕ್ಗಳು ಹಾಗೂ ಪಾದಾಚಾರಿಗಳು ಮಾತ್ರ ಸಂಚರಿಸುತ್ತಿದ್ದು ಕಾರ್ ಹಾಗೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ ಸುಳ್ಳಳ್ಳಿ, ಬಸವನಕೊಪ್ಪ, ಕ್ಯಾತ್ನಳ್ಳಿ, ಕೌಲಗಿ ಗ್ರಾಮಗಳ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಮನೆಗೆ ಹಾನಿ: ತಾಲೂಕಿನಾದ್ಯಂತ ಮಂಗಳವಾರದಿಂದ ಮಳೆ ಚುರುಕುಗೊಂಡಿದ್ದು ಎರಡುದಿನಗಳ ಕಾಲ ಸುರಿದ ಮಳೆಗೆ ತಾಲೂಕಿನಲ್ಲಿ ಎರಡು ಮನೆ ಗೋಡೆ ಬಿದ್ದು ಹಾನಿ ಸಂಭವಿಸಿವೆ.
ತಾಲೂಕಿನ ನಾಗನೂರ ಗ್ರಾಮದ ಸೌಂದರ್ಯ ಜಗದೀಶ ಪರೇಟ್ ಹಾಗೂ ಇಂದೂರ ಗ್ರಾಮದ ಕುತೇಜಾಬಿ ಅಮ್ಮಿನಬಾವಿ ಎಂಬವರ ಮನೆಯ ಗೋಡೆಗಳು ಕುಸಿದು ಹಾನಿ ಸಂಭವಿಸಿದೆ.
ತಾಲೂಕಿನಲ್ಲಿ ಮಂಗಳವಾರ 50.4 ಮಿಮೀ ಮಳೆಯಾಗಿದ್ದು, ಇಂದಿನವರೆಗೆ 336.5 ಮಿಮೀ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 823.2 ಮಿಮೀ ಮಳೆಯಾಗಿತ್ತು.
ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.