

ಬೇತಮಂಗಲ: ಪಾಲಾರ್ ಜಲಾಶಯ, ಕೋಡಿಹಳ್ಳಿ ಪ್ರದೇಶ ಮತ್ತು ರಾಮಸಾಗರ ನದಿ ಪಾತ್ರಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ಎಲ್ಲ ರೀತಿಯ ಅವಕಾಶ ಬಳಸಿಕೊಳ್ಳಲು ಚಿಂತನೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.
ಕೆಜಿಎ್ ತಾಲೂಕು ಬೇತಮಂಗಲದ ಪಾಲಾರ್ ಜಲಾಶಯಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
ಕುಡಿಯುವ ನೀರು ಸರಬರಾಜು, ನಲ್ಲಿ ಸಮಸ್ಯೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವುದು ಸೇರಿ ಹಲವು ಸೂಚನೆಗಳನ್ನು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ನೀಡಿದರು.
ಕೋಡಿಹಳ್ಳಿ ಕೆರೆ ಬಳಿಗೆ ತೆರಳಿ ಅಲ್ಲಿ ನೀರು ಹರಿಯುತ್ತಿರುವ ಸುಂದರ ನೋಟ, ನದಿ ಪಾತ್ರದಲ್ಲಿನ ವಾತಾವರಣ, ಪ್ರವಾಸಿಗರ ಜನದಟ್ಟಣೆ ವೀಸಿ ಮಾತನಾಡಿ, ಪ್ರವಾಸಿ ಕೇಂದ್ರ ಮಾಡಲು ಎಲ್ಲ ರೀತಿಯಲ್ಲೂ ಇದು ಪ್ರಶಸ್ತವಾದ ಸ್ಥಳವಾಗಿದೆ. ಈಗಾಗಲೇ ಕಾರ್ಪೊರೇಟ್ ಸಂಸ್ಥೆಗಳ ನಿಧಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ಮಾಡಿದ್ದು, ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದರು.
ಪ್ರಮುಖವಾಗಿ ಪ್ರವಾಸಿಗರಿಗೆ ಭದ್ರತೆ ಮತ್ತು ಮೂಲ ಸೌಲಭ್ಯ ವ್ಯವಸ್ಥೆ ಮಾಡಬೇಕಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಬೋಟಿಂಗ್, ಪಾರ್ಕ್ ಸೇರಿ ಇತರೆ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸದರು.
ಇಲಾಖೆ ಅಧಿಕಾರಿಗಳಿಗೆ ತರಾಟೆ
ಅವ್ಯವಸ್ಥೆ, ಅಭದ್ರತೆ, ಸ್ವಚ್ಛತೆ ಇಲ್ಲದಿರುವುದನ್ನು ನೋಡಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹತ್ತು ದಿನಗಳಿಂದ ಸತತವಾಗಿ ಕೋಡಿ ಹರಿಯುತ್ತಿದ್ದರೂ ಏಕೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ. ಪ್ರವಾಸಿಗರಿಗೆ ಯಾವ ರೀತಿಯ ಭದ್ರತೆ ನೀಡಲಾಗಿದೆ. ಕೆರೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಕನಿಷ್ಠ ಬೋಟಿಂಗ್ ವ್ಯವಸ್ಥೆ ಮಾಡಿಲ್ಲ. ತಜ್ಞ ಈಜುಗಾರರನ್ನು ನೇಮಿಸಿಲ್ಲ. ನೀರು ಸರಬರಾಜು ಮಂಡಳಿ, ಜಿಪಂ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿಯನ್ನು ಏಕೆ ಇಲ್ಲಿ ನಿಯೋಜನೆ ಮಾಡಿಲ್ಲ. ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ನಿಮಗೆ ಇಲ್ಲವೇ? ಎಂದು ಸ್ಥಳದಲ್ಲಿದ್ದ ಎಲ್ಲ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ರಸ್ತೆ ದುರಸ್ತಿಗೆ ಆದೇಶ
ಕೋಡಿಹಳ್ಳಿಯಲ್ಲಿ ರಸ್ತೆಯ ಮೂಲಕ ನೀರು ಹರಿಯುವ ಸ್ಥಳಕ್ಕೆ ಬರಬೇಕಾದರೆ ರಸ್ತೆಯೇ ಇಲ್ಲದಿರುವುದನ್ನು ಜಿಲ್ಲಾಧಿಕಾರಿ ರವಿ ಗಮನಿಸಿದರು. ಹುಲ್ಲೂರು ಗ್ರಾಮ ಪಂಚಾಯಿತಿ ಸಂಜೆ ಒಳಗೆ ರಸ್ತೆ ಮಾಡದಿದ್ದರೆ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಕೆಜಿಎಫ್ ತಾಪಂ ಇಒ ವೆಂಕಟೇಶಪ್ಪ ಅವರಿಗೆ ಸೂಚಿಸಿದರು.
ವೀಕ್ಷಣೆಗೆ ಅನುಮತಿ ನೀರಿಗಿಳಿಯಲು ರ್ನಿಬಂಧ
ನೀರಿನಲ್ಲಿ ಇಳಿದು ಆಟ ಆಡುತ್ತಿರುವುದನ್ನು ಕಂಡು ಅಸಮಾಧಾನಗೊಂಡ ಜಿಲ್ಲಾಧಿಕಾರಿ, ನೀರಿಗೆ ಇಳಿಯುವುದಕ್ಕೆ ರ್ನಿಬಂಧ ಮಾಡಿ ನೆನ್ನೆಯೆ ಆದೇಶ ಹೊರಡಿಸಿದ್ದೇನೆ. ಆದರೂ ಇಲ್ಲಿ ಜನರು ನೀರಿನಲ್ಲಿ ಆಟ ಆಡುತ್ತಿದ್ದಾರೆ. ನೀವು ಏನು ಮಾಡುತ್ತಾ ಇದ್ದೀರಿ? ಎಂದು ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸಿದರು. ಜನರು ಸುಂದರ ವಾತಾವರಣವನ್ನು ನೋಡಿ ಖುಷಿ ಪಡಬೇಕು. ನೀರಿಗೆ ಇಳಿಯದಂತೆ ನಿಯಂತ್ರಣ ಮಾಡಿ ಎಂದು ಸೂಚನೆ ನೀಡಿದರು. ಕಂದಾಯ ಇಲಾಖೆ, ಗ್ರಾಪಂ, ನೀರು ಸರಬರಾಜು ಮಂಡಳಿ,ಮತ್ತು ಪೊಲೀಸ್ ಇಲಾಖೆ ತಂಡವಾಗಿ ಕೆಲಸ ಮಾಡಬೇಕು. ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ಸಮಯದಲ್ಲಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳಬೇಕು. ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವರದಿ ಆಧರಿಸಿ ಕ್ರಮ
ಇತ್ತೀಚೆಗೆ ಪಾಲಾರ್ ಜಲಾಶಯದಲ್ಲಿ ಬಿರುಕು ಬಿಟ್ಟಿದ್ದದ್ದನ್ನು ಪರಿಶೀಲಿಸಿದ ಡಿಸಿ, ಡ್ಯಾಂನಲ್ಲಿ ಹಲವು ಕಡೆ ಬಿರುಕು ಬಿಟ್ಟಿದೆ, ಯಾವ ರೀತಿಯ ಅಪಾಯ ಎದುರಾಗಬಹುದು, ಹೇಗೆ ಸರಿಪಡಿಸಬಹುದು ಎನ್ನುವ ಬಗ್ಗೆ ತಜ್ಞರ ತಂಡ ಎರಡು ಮೂರು ದಿನಗಳಲ್ಲಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುತ್ತದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.