

ಮೂಡಿಗೆರೆ: ಎರಡು ದಿನ ಬಿಡುವು ನೀಡಿದ್ದ ಮಳೆ ಸೋಮವಾರ ಸಂಜೆಯಿಂದ ಆರಂಭವಾಗಿ ಮಂಗಳವಾರ ಬೆಳಗ್ಗಿನವರಿಗೂ ಧಾರಾಕಾರವಾಗಿ ಸುರಿದ ಮಳೆಯಿಂದ ತಾಲೂಕಿನಾದ್ಯಂತ ಕೆಲವೆಡೆ ಅವಾಂತರ ಸೃಷ್ಟಿಯಾಗಿದ್ದು ಶಾಲೆ-ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಹೇಮಾವತಿ, ಜಪಾವತಿ, ಸುಂಡೆಕೆರೆ ಹಳ್ಳ, ಸುಣ್ಣದ ಹಳ್ಳಗಳು ಉಕ್ಕಿ ಹರಿದು ಮಾನಾಲ್, ಕಜ್ಜೆಹಳ್ಳಿ, ಉದುಸೆ, ಅಣಜೂರು, ಕಿರುಗುಂದ ಮತ್ತಿತರ ಗ್ರಾಮಗಳಲ್ಲಿ ಸಸಿ ಮಡಿಗಳು ಕೊಚ್ಚಿಹೋಗಿದೆ. ಶುಂಠಿ, ಕಾಫಿ ತೋಟಕ್ಕೆ ಹಾನಿಯಾಗಿದೆ. ಬಕ್ಕಿ ಮತ್ತು ಬೈದುವಳ್ಳಿ ಗ್ರಾಮದ 2 ಸೇತುವೆಗಳು ಮುಳುಗಡೆಯಾಗಿದೆ. ತುಮಕೂರು-ಮಂಗಳೂರು ಮತ್ತು ಮೂಡಿಗೆರೆ-ಕಡೂರು ರಾಷ್ಟ್ರೀಯ ಹೆದ್ದಾರಿ ಅಣಜೂರು, ಮುದ್ರೆಮನೆ, ಬಿಳಗುಳ, ಬಿದರಹಳ್ಳಿ ಗ್ರಾಮದಲ್ಲಿ ಜಲಾವೃತವಾಗಿದೆ.
ಮಂಗಳವಾರ ಬೆಳಗ್ಗೆ ಪಟ್ಟಣದ ಗಂಗನಮಕ್ಕಿ ಬಡಾವಣೆಯ ರಾಜಕಾಲುವೆ ಪ್ರವಾಹದಂತೆ ಉಕ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿತ್ತು. ಇದರಿಂದ ವಾಹನಗಳು ಹೋಗಲು ಸಾಧ್ಯವಾಗದೆ ಸಾಲುಗಟ್ಟಿ ನಿಂತಿದ್ದವು. ಪಟ್ಟಣದಲ್ಲಿ ರಸ್ತೆ ಬದಿ ಚರಂಡಿಗೆ ನೀರು ಹರಿಯಲು ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿ ಹರಿದು ಕೆ.ಎಂ.ರಸ್ತೆ ಯುದ್ದಕ್ಕೂ ಹಾಗೂ ಗೆಂಡೆಹಳ್ಳಿ ರಸ್ತೆಯ ಪೊಲೀಸ್ ಠಾಣೆ ಮುಂಭಾಗದಲ್ಲಿ ರಸ್ತೆ ದೊಡ್ಡ ಗಾತ್ರದ ಗುಂಡಿಗಳಾಗಿದೆ.
ಗ್ರಾಮೀಣ ಭಾಗಕ್ಕೆ ಭಾನುವಾರ ವಿದ್ಯುತ್ ಪೂರೈಕೆಯಾಗಿದ್ದರೂ ಸೋಮವಾರ ರಾತ್ರಿ ಮಳೆಗೆ ಅಲ್ಲಲ್ಲಿ ಮರ ಬಿದ್ದು ಮತ್ತೆ ವಿದ್ಯುತ್ ಕೈಕೊಟ್ಟಿದೆ. ಚಾರ್ಮಾಡಿ ಘಾಟ್‌ನ 9ನೇ ತಿರುವಿನಲ್ಲಿ ಬೆಳಗಿನ ಜಾವ ರಸ್ತೆಗೆ ಗುಡ್ಡ ಕುಸಿದು 2 ಗಂಟೆ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಮಣ್ಣು ತೆರವುಗೊಳಿಸಿದ ನಂತರ ವಾಹನಗಳು ಮುಂದಕ್ಕೆ ಸಾಗಿವೆ. ಜಿ.ಹೊಸಳ್ಳಿ ಗ್ರಾಮದ ಪೊಡಿಯ ಕಾಲನಿ ರಸ್ತೆಯಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಯಾಗಿದೆ. ಸ್ಥಳಕ್ಕೆ ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್, ಪಿಡಿಒ ಸಿಂಚನ ಭೇಟಿ ನೀಡಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದರು.