ಕೋಡಿ ಹರಿಯುತ್ತಿದೆ ಕಳಸಕೊಪ್ಪ ಕೆರೆ

The river is flowing in Kalasakoppa Lake.
ಕೋಡಿ ಹರಿಯುತ್ತಿರುವ ಕಳಸಕೊಪ್ಪ ಕೆರೆ
Published on

ಕಲಾದಗಿ: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಕೆರೆ ಎಂಬ ಖ್ಯಾತಿ ಪಡೆದಿರುವ ಸಮೀಪದ ‘ಕಳಸಕೊಪ್ಪ ಕೆರೆ’ ನಿರೀಕ್ಷೆಯ ಮೂರು ತಿಂಗಳಿಗೂ ಮೊದಲೇ ಭರ್ತಿಯಾಗಿದ್ದು, ಗುರುವಾರ ಮುಂಜಾನೆಯಿಂದ ‘ಕೊಡಿ’ ಹರಿಯುತ್ತಿದ್ದು, ಈ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.

ಘಟಪ್ರಭಾ ನದಿಯಲ್ಲಿ ನೀರು ಹರಿಯುತ್ತಿದ್ದಾಗಲೇ ಕೆರೆಯನ್ನು ತುಂಬಿಸಬೇಕು ಎಂಬ ರೈತರ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪ್ರತಿ ವರ್ಷಕ್ಕಿಂತ ತಿಂಗಳು ಮೊದಲೇ ಅಂದರೆ ಕಳೆದ ಜುಲೈ 2ರಂದು ಕಳಸಕೊಪ್ಪ ಕೆರೆ ಸೇರಿದಂತೆ ಇನ್ನಿತರ ಎಂಟು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಶಾಸಕ ಜೆ.ಟಿ. ಪಾಟೀಲ ಗ್ರಾಮದ ಶೆಲ್ಲಿಕೇರಿ ಕ್ರಾಸ್‌ಬಳಿ ಇರುವ ಹೆರಕಲ್ ಏತ ನೀರಾವರಿ (ದಕ್ಷಿಣ) ಯೋಜನೆಯ ಜಾಕ್‌ವೆಲ್‌ಲ್ನಲ್ಲಿ ಚಾಲನೆ ನೀಡಿದ್ದರು.

ಕೆರೆ ತುಂಬಲು ಬೇಕಿಷ್ಟು ತಿಂಗಳು

ಕಳಸಕೊಪ್ಪ ಕೆರೆ ತುಂಬಲು ಕನಿಷ್ಠ 3 ತಿಂಗಳಾದರೂ ಬೇಕು ಎಂಬುದು ಇಂಜಿನಿಯರ್‌ಗಳ ಲೆಕ್ಕವಾಗಿತ್ತು. ಆದರೆ ಈ ಬಾರಿ ಕೆರೆಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡುವಾಗ ಕೆರೆಯಲ್ಲಿ 7 ಅಡಿಯಷ್ಟು ಮಾತ್ರ ನೀರಿತ್ತು. ಜಾಕ್‌ವೆಲ್‌ನ ಎಲ್ಲಾ ಮೋಟಾರುಗಳನ್ನು ನಿರಂತರವಾಗಿ ಚಾಲನೆಯಲ್ಲಿಟ್ಟು ಕೆರೆಯನ್ನು ಬೇಗ ತುಂಬಿಸಬೇಕು ಎಂಬ ಶಾಸಕರ ಖಡಕ್ ಸೂಚನೆ ಹಾಗೂ ಇತ್ತೀಚೆಗೆ ಕೆರೆಯ ಮೇಲ್ಭಾಗದಲ್ಲಿ ಸುರಿದ ಮಳೆ ನೀರು ಬಂದು ಸೇರಿದ್ದರಿಂದ ಕೆರೆ ಬೇಗ ತುಂಬಿ ಹರಿಯಲು ಕಾರಣವಾಗಿದೆ.

ಈ ವರ್ಷವೂ ಕೋಡಿ ಹರಿಯಿತು

ಬಾಗಲಕೋಟೆ ತಾಲೂಕಿನ ಐದು ಗ್ರಾಮಗಳ 1142 ಹೆಕ್ಟೇರ್ ಪ್ರದೇಶವನ್ನು ನೀರಾವರಿಯನ್ನಾಗಿಸುವ ಜೊತೆಗೆ ಅಂತರ್ಜಲ ಹೆಚ್ಚಾಗಲು ಕಾರಣವಾಗುವ ಕಳಸಕೊಪ್ಪ ಕೆರೆ ಕಳೆದ ವರ್ಷದಂತೆ ಈ ವರ್ಷವೂ ಭರ್ತಿಯಾಗಿ ಕೋಡಿ ಹರಿಯುತ್ತಿರುವುದು ರೈತರ ಆನಂದಕ್ಕೆ ಕಾರಣವಾಗಿದೆ. ಸುತ್ತಲು ಹಸಿರು ತುಂಬಿದ ಬೆಟ್ಟ, ಕಷಿ ಭೂಮಿಯ ನಡುವಿರುವ 200 ಹೆಕ್ಟೇರ್ ಪ್ರದೇಶದ ವ್ಯಾಪ್ತಿಯಲ್ಲಿನ ಕೆರೆ ಭರ್ತಿಯಾಗಿರುವುದು ಒಂದು ಸೌಂದರ್ಯವಾದರೆ, ಕೆರೆ ‘ಕೋಡಿ’ ಬಿದ್ದು 900 ಅಡಿ ಉದ್ದವಿರುವ ಓಗ್ ಮಾದರಿಯ ಕಟ್ಟೆಯ ಮೇಲಿಂದ ನೀರು ಧುಮ್ಮಿಕ್ಕುತ್ತಿರುವುದು ನಯನ ಮನೋಹರವಾಗಿ ಕಂಗೊಳಿಸುವುದರ ಮೂಲಕ ತನ್ನತ್ತ ಜನರನ್ನು ಸೆಳೆಯುತ್ತಿದೆ.

ಉಳಿದ ಕೆರೆಗಳೂ ಬಹುತೇಕ ಭರ್ತಿ

ಜಾಕ್‌ವೆಲ್‌ನಿಂದ ನೀರು ಹರಿಸಿದ ಎಂಟು ಕೆರೆಗಳಲ್ಲಿ ಸದ್ಯಕ್ಕೆ ಕಳಸಕೊಪ್ಪ ಹಾಗೂ ಕೆರೂರು ಕೆರೆಗಳು ಭರ್ತಿಯಾಗಿದ್ದು, ಕೈನಕಟ್ಟಿ ಕೆರೆಯನ್ನು ಹೊರತುಪಡಿಸಿ ಇನ್ನುಳಿದ ಮಾಳಗಿ, ಜಮ್ಮನಕಟ್ಟಿ, ಅನವಾಲ, ಸಾಗನೂರು ಹಾಗೂ ಕಟಗೇರಿ ಕೆರೆಗಳು ಬಹುತೇಕವಾಗಿ ತುಂಬವ ಹಂತದಲ್ಲಿರುವುದು ಆ ಭಾಗದ ಅನ್ನದಾತರ ಸಂತಸಕ್ಕೆ ಕಾರಣವಾಗಿದೆ.

16ರಂದು ಬಾಗಿನ ಸಮರ್ಪಣೆ

ಭರ್ತಿಯಾಗಿ ಕೋಡಿ ಹರಿಯುತ್ತಿರುವ ಕಳಸಕೊಪ್ಪ ಕೆರೆಗೆ ಆ. 16 ರಂದು ಬಾಗಿನ ಸಮರ್ಪಣೆ ಮಾಡಲಾಗುವುದು ಎಂದು ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವಧಿಗೂ ಮುನ್ನವೆ ಕೆರೆ ಭರ್ತಿಯಾಗಿ ಕೋಡಿ ಹರಿಯುತ್ತಿರುವುದು ಸಂತೋಷ ತಂದಿದೆ. ಅಂದು ಬೆಳಗ್ಗೆ 10.30 ಕ್ಕೆ ಆ ಭಾಗದ ಎಲ್ಲಾ ಅನ್ನದಾತರ ಸಮ್ಮುಖದಲ್ಲಿ ಕೆರೆಗೆ ಬಾಗಿನ ಸಮರ್ಪಣೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net