

ಶಿರಸಿ: ಯಕ್ಷಗಾನ ಸಂಸ್ಕಾರ ಕೊಡುವ ಮಾಧ್ಯಮ ಕಲೆ. ಯಕ್ಷಗಾನ ಕಲೆಯನ್ನು ಕಲಿತವನಿಗೂ ಸಂಸ್ಕಾರ ಬರುತ್ತದೆ, ನೋಡುವವರಿಗೂ ಸಂಸ್ಕಾರ ಬರುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಶನಿವಾರ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಯಕ್ಷಶಾಲ್ಮಲಾ ಸಂಸ್ಥೆಯ 19ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀಪಾದ ಭಟ್ ತಂಡಿಮನೆ ಅವರಿಗೆ ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಯನ್ನು ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಬೇರೆ ಯಾವ ಕಲೆಗೂ ಇಲ್ಲದಷ್ಟು ಆಯಾಮಗಳು ಯಕ್ಷಗಾನಕ್ಕಿದೆ. ಅನೇಕ ನಮ್ಮ ಪ್ರಾಚೀನ ಮೌಲ್ಯಗಳು ನಮಗೆ ನೋಡಲು ಸಿಗುವುದಿಲ್ಲ. ಅದನ್ನು ಉಳಿಸಿಕೊಳ್ಳಲು ಇಂತಹ ಕಲೆಗಳನ್ನು ಉಳಿಸಿ ಬೆಳೆಸಬೇಕು. ನಮ್ಮ ದೇಶದಲ್ಲಿ ಸಂಸ್ಕಾರ ಇನ್ನೂ ಜೀವಂತವಾಗಿದೆ. ನಮ್ಮ ದೇಶದ ಕಲೆಗಳು ಜನರಿಗೆ ಸಾಕಷ್ಟು ಸಂಸ್ಕಾರವನ್ನು ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಂಸ್ಕಾರವು ಹಾಳಾಗುವ ಸ್ಥಿತಿ ಬರುತ್ತಿದೆಯೋ ಎಂಬ ಭಯ ಪ್ರಾರಂಭವಾಗಿದೆ. ಯಕ್ಷಗಾನದಂತಹ ಪ್ರಬಲ ಸಂಸ್ಕಾರದ ಮೂಲಕ ಜನರಲ್ಲಿ ಇನ್ನಷ್ಟು ಸಂಸ್ಕಾರಗಳು ಬೆಳೆಯಲಿ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಪಾದ ಭಟ್ ತಂಡಿಮನೆ, ಯಾವುದೇ ಕಲೆ ಬೆಳೆಯಲು ಬದಲಾವಣೆ ಅಗತ್ಯ. ಆದರೆ ಆ ಬದಲಾವಣೆಯು ಕಲೆಯ ಸತ್ವ ಕೊಚ್ಚಿಕೊಂಡು ಹೋಗುವಷ್ಟು ಇರಬಾರದು ಎಂದರು.
ಪತ್ರಕರ್ತ ರವೀಂದ್ರ ಭಟ್ ಐನಕೈ ಮಾತನಾಡಿ, ಕನ್ನಡ ಮಾಧ್ಯಮ ರಂಗದಲ್ಲಿ ಇರುವವರು ಬಹುತೇಕರು ಯಕ್ಷಗಾನ ಹಿನ್ನೆಲೆ ಇರುವವರೇ ಆಗಿದ್ದಾರೆ. ಪ್ರೌಢಶಾಲೆ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಮತ್ತಿಘಟ್ಟ ನಿರೂಪಿಸಿದರು. ಶಂಕರ ಭಟ್ ಉಂಚಳ್ಳಿ ಪ್ರಶಸ್ತಿ ಪತ್ರ ವಾಚಿಸಿದರು. ಜಿ.ಜಿ. ಹೆಗಡೆ ಕನೇನಳ್ಳಿ ವಂದಿಸಿದರು.