

ರಟ್ಟಿಹಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪವಿತ್ರವಾದ ಹಕ್ಕಾಗಿದೆ ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ನಲ್ಲಿ ತಾಲೂಕಾಡಳಿತ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮತದಾರರು ಚುನಾವಣೆಯಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ, ಆಸೆ ಆಮಿಷಗಳಿಗೆ ಒಳಗಾಗದೇ ಕಡ್ಡಾಯವಾಗಿ ಮತದಾನ ಮಾಡಬೇಕಾಗಿದೆ ಎಂದರು.
ಶಿಕ್ಷಕ ಪ್ರಶಾಂತ ಕುಲ್ಕರ್ಣಿ ಉಪನ್ಯಾಸವನ್ನು ನೀಡಿ, ಅರ್ಹ ಮತದಾರರು ಮತದಾನವನ್ನು ತಮ್ಮ ಹಕ್ಕು ಎಂದು ತಪ್ಪದೆ ಚಲಾಯಿಸಬೇಕು ಎಂದರು.
ಪ್ರಿಯದರ್ಶಿನಿ ಕಾಲೇಜ್ ಪ್ರಾಚಾರ್ಯ ಎ.ಜಿ. ರಾಘವೇಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಪ್ರಾಚಾರ್ಯ ಜಿ.ಜಿ. ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ತಾಲೂಕು ಮಟ್ಟದಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ, ಪ್ರಬಂಧ, ಚಿತ್ರಕಲೆ, ಭಿತ್ತಿಪತ್ರ ತಯಾರಿಕೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಣ ಸಂಯೋಜಕಿ ವಾಣಿಶ್ರೀ ಕೆ., ಜಬೀವುಲ್ಲಾ ಮಕನದಾರ, ಜಗದೀಶ ಪೂಜಾರ, ಕುಬೇರಪ್ಪ ಎಂ, ಲಿಂಗರಾಜ ಮೂಲಮನಿ, ಸಿಬ್ಬಂದಿ ಉಪಸ್ಥಿತರಿದ್ದರು. ಸಿಆರ್ಪಿ ಜಗದೀಶಕುಮಾರ ಕಠಾರೆ ಕಾರ್ಯಕ್ರಮ ನಿರ್ವಹಿಸಿದರು.