

ಕಂಪ್ಲಿ: ತಾಲೂಕಿನ ತುಂಗಭದ್ರಾ ನದಿ ಪಾತ್ರ, ಕೊಳವೆಬಾವಿ ನೀರಾವರಿ, ವಿಜಯನಗರ ಕಾಲುವೆ ವ್ಯಾಪ್ತಿಯ ರೈತರು ಭತ್ತದ ಸಸಿ ಮಡಿ ತಯಾರಿಸುವಲ್ಲಿ ನಿರತರಾಗಿದ್ದಾರೆ.
ಭತ್ತದ ಸಸಿ ಮಡಿ ಹಾಕಿಕೊಳ್ಳುವಾಗ ರೈತರು ಗುಣಮಟ್ಟದ ಅಧಿಕೃತ ಬಿತ್ತನೆ ಬೀಜ ಆಯ್ಕೆ ಮಾಡಿಕೊಳ್ಳಬೇಕು. ಬೀಜೋಪಚಾರ, ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವಲ್ಲಿ ಜಾಗೃತಿ ತೋರಬೇಕು. ಭತ್ತ ಬೆಳೆಯುವ ಪ್ರದೇಶದ ಮಣ್ಣಿನ ಫಲವತ್ತತೆ ಕಾಪಾಡಲು ಹಸಿರೆಲೆ ಗೊಬ್ಬರ ಬೆಳೆಯುವಂತೆ ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ತಾಲೂಕಿನಲ್ಲಿ ಒಟ್ಟಾರೆ 35,235.30 ಹೆಕ್ಟೇರ್ ಭೌಗೋಳಿಕ ಪ್ರದೇಶವಿದ್ದು, ಈ ಪೈಕಿ 26,918ಹೆಕ್ಟೇರ್ ಸಾಗುವಳಿ ಪ್ರದೇಶ ಇದೆ. 23,001 ಹೆಕ್ಟೇರ್ ನೀರಾವರಿ ಪ್ರದೇಶವಿದೆ. 4,833 ಹೆಕ್ಟೇರ್ ಬಾವಿ/ಕೊಳವೆ ಬಾವಿ ನೀರಾವರಿ ಹೊಂದಿದೆ. 1262 ಹೆಕ್ಟೇರ್ ವಿಜಯನಗರಕಾಲುವೆ ನೀರಾವರಿ ಹೊಂದಿದೆ.
ಅಝೋಸ್ಪೈರಿಲಂ, ಡಿಎಸ್‌ಪಿ(ರಂಜಕ ಕರಗಿಸುವ ಜೀವಾಣು), ಟ್ರೈಕೋಡರ್ಮ ಬಳಸಿ ಬೀಜೋಪಚಾರ ಮಾಡುವುದರಿಂದ ಸಸಿಗಳಲ್ಲಿ ಉತ್ತಮ ಕುಡಿಯೊಡೆಯುವುದು (ಜರ್ಮೀನೇಷನ್), ಸಸಿ ಮಡಿಗಳಲ್ಲಿ ಉತ್ತಮ ಬೆಳವಣಿಗೆಯಾಗುತ್ತದೆ. ಸಸಿ ಮಡಿ ತಯಾರಿಸುವಾಗ ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ, ಸಿಟಿ ಕಾಂಪೋಸ್ಟ್ ಗೊಬ್ಬರ ನೀಡುವುದು ಉತ್ತಮ. ಇದರಿಂದ ಉತ್ತಮ ಸಸಿಗಳು ದೊರಕುತ್ತದೆ.
ಸಸಿ ಮಡಿಯಲ್ಲಿ ಸಸಿ ಬೆಳೆಸಲು 40 ದಿನ ಬೇಕಿದ್ದು, ಈ ಸಮಯದಲ್ಲಿ ಭತ್ತ ಬೆಳೆಯುವ ಗದ್ದೆಯ ಮಣ್ಣಿನ ಫಲವತ್ತತೆ ಸುಧಾರಣೆಗೆ ರೈತರು 30ರಿಂದ 40 ದಿನಗಳ ಡಯಾಂಚ, ಸೆಣಬು, ಪಿಳ್ಳೆಪಿಸುರು ಬೆಳೆಯಬೇಕು. ಇದರಿಂದ ಮಣ್ಣಿನ ಸಾವಯವ ಅಂಶ, ಇಂಗಾಲ ಅಂಶ ವೃದ್ಧಿಸಿ ಬೆಳೆ ರೋಗ ನಿರೋಧಕ ಶಕ್ತಿಗಳಿಸಲು ಸಾಧ್ಯವಾಗುತ್ತದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಹಸಿರೆಲೆ ಗೊಬ್ಬರ ಬೆಳೆದು ಮಗ್ಗು ಹೊಡೆಯಬೇಕಿದೆ. ಮಣ್ಣಿನ ಫಲವತ್ತತೆಗೆ ರೈತರು ಉದ್ದು, ಎಳ್ಳು, ಅಲಸಂದಿ ಬೆಳೆದಲ್ಲಿ ಮಣ್ಣಿನ ಆರೋಗ್ಯ ಕಾಪಾಡುವ ಜತೆಗೆೆ ಆದಾಯಗಳಿಸಬಹುದಾಗಿದೆ ಎಂದು ಕೃಷಿ ವಿಜ್ಞಾನಿ ಡಾ. ಎಂ.ಚಂದ್ರಶೇಖರ ಕಾಲ್ವಿಬಾವಿ ರೈತರಿಗೆ ಸಲಹೆ ನೀಡಿದ್ದಾರೆ.
ರೈತರು ನಿರಂತರ ಭತ್ತ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಭತ್ತ ಸಸಿ ಮಡಿ ತಯಾರಿಸುವಾಗ ಮಣ್ಣಿಗೆ ಸಗಣಿ ಗೊಬ್ಬರ, ಎರೆಹುಳು ಗೊಬ್ಬರ ನೀಡಬೇಕು. ಮಡಿ ಹಾಕಿಕೊಳ್ಳುವಾಗ ಬೀಜೋಪಚಾರ ಕೈಗೊಳ್ಳಬೇಕು. ಭತ್ತ ಬೆಳೆಯುವ ಗದ್ದೆ ಮಣ್ಣಿನ ಫಲವತ್ತತೆ ಕಾಪಾಡಲು ಹಸಿರೆಲೆ ಗೊಬ್ಬರ ಬೆಳೆದು ಮಗ್ಗು ಹೊಡೆಯಬೇಕು. ಡಾ.ಎಂ.ಚಂದ್ರಶೇಖರ ಕಾಲ್ವಿಬಾವಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ, ಸಿರಗುಪ್ಪ ಸಸಿ ಮಡಿ ಹಾಕಿದ ನಂತರ ಕಣೆನೊಣ ಕಂಡು ಬಂದರೆ 1 ಕೆಜಿ ಫ್ರಿಫ್ರೊನಿಲ್ 0.3 ಜಿಆರ್ ಅಥವಾ ಕಾರ್ಬೋಪ್ಯೂರಾನ್ 3ಜಿ ಪ್ರತಿ ಎಕರೆಗೆ ಬೇಕಾಗುವ ಸಸಿ ಮಡಿಗಳಿಗೆ ಹಾಕಬೇಕು. ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಕೆ.ಸೋಮಶೇಖರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ, ಕಂಪ್ಲಿ