ಕಗ್ಗಂಟಾಗಿ ಉಳಿದ ಡಿಜಿಪಿ ನೇಮಕ

dgp nilamani
Published on

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ನಿವೃತ್ತಿಗೆ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಆದರೆ, ಹೊಸ ಡಿಜಿ-ಐಜಿಪಿ ನೇಮಕ ವಿಚಾರ ಇನ್ನೂ ಕಗ್ಗಂಟಾಗಿ ಉಳಿದಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಒತ್ತಡದಲ್ಲಿ ಇರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ಖಾಸಗಿ ಭೇಟಿಗೆ ಡಿಜಿಪಿ ಹುದ್ದೆ ಆಕಾಂಕ್ಷಿಗಳು ತೀವ್ರವಾಗಿ ಯತ್ನಿಸುತ್ತಿದ್ದಾರೆ. ಆದರೆ, ಯಾರೊಬ್ಬರಿಗೂ ಅವಕಾಶ ಸಿಕ್ಕಿಲ್ಲ. ಮತ್ತೊಂದೆಡೆ ಸಿಎಂ ಅಥವಾ ಗೃಹ ಸಚಿವರು ಸಹ ಹೊಸ ಡಿಜಿಪಿ ಆಯ್ಕೆ ಸಂಬಂಧ ಸಭೆ ನಡೆಸಿಲ್ಲ. ಇದರಿಂದ ಡಿಜಿಪಿ ನೀಲಮಣಿ ಎನ್.ರಾಜು ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಕುತೂಹಲ ಪೊಲೀಸ್ ಇಲಾಖೆಯಲ್ಲಿ ಮೂಡಿಸಿದೆ. ಡಿಜಿಪಿ ಹುದ್ದೆ ಮೇಲೆ ಆತಂರಿಕ ಭದ್ರತಾ ವಿಭಾಗ ಡಿಜಿಪಿ ಎ.ಎಂ. ಪ್ರಸಾದ್ ಮತ್ತು ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಲಾಬಿ ನಡೆಸಿದ್ದು, ಅದೃಷ್ಟ ಯಾರಿಗೆ ಒಲಿಯಲಿದೆ ನೋಡಬೇಕಾಗಿದೆ.

ನೀಲಮಣಿ ರಾಜು (ಜ.31) ನಿವೃತ್ತರಾಗ ಲಿದ್ದಾರೆ. ಸೇವಾ ಹಿರಿತನ ಆಧಾರದ ಮೇರೆಗೆ 1985 ಬ್ಯಾಚ್​ನ ಎ.ಎಂ. ಪ್ರಸಾದ್, 1986ರ ಸಾಲಿನ ಪ್ರವೀಣ್ ಸೂದ್ ಹಾಗೂ ಪಿ.ಕೆ. ಗರ್ಗ್ ಅರ್ಹತೆ ಹೊಂದಿದ್ದಾರೆ. ಈ ಪೈಕಿ ಪ್ರಸಾದ್, 9 ತಿಂಗಳ ಸೇವಾವಧಿ ಹೊಂದಿದ್ದು, ಅಕ್ಟೋಬರ್​ನಲ್ಲಿ ನಿವೃತ್ತರಾಗಲಿದ್ದಾರೆ. ಪ್ರವೀಣ್ ಸೂದ್​ಗೆ 4 ವರ್ಷಗಳ ಸೇವಾವಧಿ ಇದೆ. ಹೀಗಾಗಿ ಡಿಜಿಪಿ ಹುದ್ದೆಗೆ ಈ ಇಬ್ಬರ ಹೆಸರುಗಳು ಮುಂಚೂಣೆಯಲ್ಲಿವೆ. ಗರ್ಗ್ ತಾವಾಗಿಯೇ ರೇಸ್​ನಿಂದ ದೂರ ಉಳಿದಿದ್ದಾರೆ.

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಡಿಜಿ-ಐಜಿಪಿ ಆಯ್ಕೆ ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಹುತೇಕ ಜಿಲ್ಲೆಗಳಿಗೆ ಎಸ್​ಪಿಗಳನ್ನು ನೇಮಕ ಮಾಡಲಾಗಿತ್ತು. ಅವರಲ್ಲಿ ಬಹುತೇಕರು ಎತ್ತಂಗಡಿ ಆಗುವ ಸಾಧ್ಯತೆಗಳಿವೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು ಹೊರತುಪಡಿಸಿ ಕಲುಬುರಗಿ, ಬೆಳಗಾವಿ ಹಾಗೂ ಮೈಸೂರು ನಗರ ಆಯುಕ್ತರು ಸಹ ಬದಲಾವಣೆ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net