

ಮೈಸೂರು: ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಒಳಪಂಗಡಗಳನ್ನು ಬದಿಗಿಟ್ಟು ನಾವೆಲ್ಲರು ಒಂದು ಎಂಬ ಭಾವನೆಯಿಂದ ಮುಂದೆ ಸಾಗಿದಾಗ ಮಾತ್ರ ಸಮಾಜಕ್ಕೆ ಒಳಿತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
‘ವಿಜಯಾನಂದ್ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಈ ಹಿಂದೆ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ರಾಜಕೀಯ ಷಡ್ಯಂತ್ರ ನಡೆದ ಸಂದರ್ಭ ಸಮಾಜದ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ ರಾಜಕೀಯ ಬದಿಗಿಟ್ಟು ಸಮಾಜದ ಪರವಾಗಿ ನಿಂತು ಸಮಾಜವನ್ನು ಒಡೆಯಬಾರದು ಎಂಬ ಸ್ಪಷ್ಟ ಸಂದೇಶ ಸಾರಿದರು. ಜಾತಿ ಜನಗಣತಿ ಎಂಬ ರಾಜಕೀಯ ಪಗಡೆಯನ್ನು ಕೆಲವರು ಉರುಳಿಸಿದ್ದು, ಸಚಿವ ಎಂ.ಬಿ.ಪಾಟೀಲ್ ರಾಜಕೀಯ ಮೀರಿ ಸಮಾಜದ ಪರವಾಗಿ ಧ್ವನಿ ಎತ್ತಿರುವುದು ಸಂತಸ. ಸಮಾಜವನ್ನು ಒಗ್ಗೂಡಿಸುವ ಕೆಲಸ ಎಲ್ಲರ ಮೇಲಿದೆ ಎಂದು ಹೇಳಿದರು.
ಇಡೀ ವಿಶ್ವದಲ್ಲಿ ಮೊದಲ ಬಾರಿಗೆ ಸ್ವಾವಲಂಬನೆಯ ಒಂದು ಮಹಾ ಸಂದೇಶ ನೀಡಿರುವ ವ್ಯಕ್ತಿ, ಶಕ್ತಿ ಯಾರಾದರು ಇದ್ದರೆ ಅದು ಜಗಜ್ಯೋತಿ ಬಸವಣ್ಣ. ಕಾಯಕದಲ್ಲಿ ಕೈಲಾಸ ಕಾಣಬೇಕು ಎಂಬ ತತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು. ವಚನಗಳು ಹಾಗೂ ಸಾಮಾಜಿಕ ಕ್ರಾಂತಿಯದಷ್ಟೇ ಬಸವಣ್ಣ ಅವರು ವಿಶ್ವಗುರು ಆಗಲಿಲ್ಲ. ಅವರು ಪ್ರತಿಪಾದಿಸಿದ ಕಾಯಕತತ್ವದಿಂದ ವಿಶ್ವಗುರು ಆಗಿದ್ದಾರೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯ ರಾಜ್ಯದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಗೆ ದೊಡ್ಡ ಕೊಡುಗೆ ನೀಡಿದೆ. ನಮ್ಮ ಹೆಮ್ಮೆಯ ವೀರಶೈವ ಲಿಂಗಾಯತ ಸಮಾಜ ಬೇಡುವ ಸಮಾಜವಲ್ಲ, ನೀಡುವ ಸಮಾಜ ಎಂಬುದನ್ನು ಎಲ್ಲರು ನೆನಪು ಮಾಡಿಕೊ ಳ್ಳಬೇಕು. ವೀರಶೈವ ಲಿಂಗಾಯತ ಸಮಾಜದ ಒಳಿತಿನಿಂದ ರಾಜ್ಯಕ್ಕೂ ಒಳಿತಾಗುತ್ತದೆ. ಈ ಸಮುದಾಯ ಒಗ್ಗಟ್ಟಾದ ಸಂದರ್ಭದಲೆಲ್ಲ ರಾಜ್ಯಕ್ಕೆ ಒಳ್ಳೆಯದಾಗಿದೆ ಎಂಬ ಅಂಶವನ್ನು ಯಾರು ಸಹ ಮರಿಯಬಾರದು ಎಂದರು.
ನಾನು ಉದ್ಯಮಿಯಾಗಬೇಕು ಎಂದು ಬಯಸಿದ್ದ ಸಂದರ್ಭ ನಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಒಂದು ಕಿವಿಮಾತು ಹೇಳಿದ್ದರು, ಆ ಮಾತು ಇಂದಿಗೂ ನನಗೆ ನೆನಪು ಇದೆ. ‘ನೀನು ಎಷ್ಟೇ ದೊಡ್ಡ ವ್ಯವಹಾರ ಮಾಡು. ಆದರೆ, ರಾತ್ರಿ ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುವಷ್ಟು ಮಾತ್ರ ವ್ಯವಹಾರ ಮಾಡು’ ಎಂದು ಸಲಹೆ ನೀಡಿದ್ದರು. ಹಾಗಾಗಿ ಯುವ ಉದ್ಯಮಿಗಳು ಉದ್ಯಮ ಕ್ಷೇತ್ರದಲ್ಲಿ ಬೆಳೆಯುವ ಜತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಉತ್ತಮ ಸಂಪಾದನೆ ಜತೆಗೆ ಉತ್ತಮ ನಡವಳಿಕೆ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲರು ಒಟ್ಟಾಗಿ ಸೇರಿ ಒಟ್ಟಾಗಿ ಬೆಳೆಯಬೇಕು ಎಂಬ ಆಶಯವನ್ನು ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಹೊಂದಿರುವುದು ಸಂತಸದ ವಿಚಾರ. ನಾಡಿನ ಹಾಗೂ ದೇಶದ ಹಿತದೃಷ್ಟಿಯಿಂದ ನಾವೆಲ್ಲ ಬೆಳವಣಿಗೆ ಕಾಣಬೇಕು, ನಾವೆಲ್ಲರು ಒಳಪಂಗಡಗಳನ್ನು ಮರೆತು ಒಟ್ಟಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ. ಸಮುದಾಯದ ಉದ್ಯಮಿಗಳು, ವೃತ್ತಿಪರರನ್ನು ಒಂದೇ ವೇದಿಕೆಯಡಿ ತಂದು ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆ ಮುನ್ನುಡಿ ಬರೆದಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಸೂತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ವೇದಿಕೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಾಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ, ಫೆಡರೇಷನ್ ಆಫ್ ಇಂಡಸ್ಟ್ರೀಸ್ ಆಫ್ ಇಂಡಿಯಾದ ಅಧ್ಯಕ್ಷ ಬಾಲಚಂದ್ರರಾವ್ ರಾಣೆ, ಆದರ್ಶ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ಜಯಶಂಕರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಕಾನ್‌ಕ್ಲೇವ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂತೋಷ್ ಕೆಂಚಾಂಬ, ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಮೈಸೂರು ಘಟಕದ ಅಧ್ಯಕ್ಷ ಕೆ.ಎಸ್. ಮಹದೇವ ಪ್ರಸಾದ್ ಇದ್ದರು.
ವಿಜಯ ಶಂಕೇಶ್ವರ್, ಆನಂದ್ ಸಂಕೇಶ್ವರ್ ಸಮಾಜದ ಕಣ್ಣು
ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಶಂಕೇಶ್ವರ್, ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ್ ಸಂಕೇಶ್ವರ್ ಅವರು ನಮ್ಮ ಸಮಾಜದ ಕಣ್ಣು ಇದ್ದಂತೆ. ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ಗೆ ಅವರು ಶಕ್ತಿ ತುಂಬುವ ಕಾರ್ಯ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.