

ಶಿರಹಟ್ಟಿ: ತಾಲೂಕಿನ ವಡವಿ ಗ್ರಾಮದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮುರಾರ್ಜಿ ವಸತಿ ಶಾಲೆ ಕಟ್ಟಡದ ಕಾಮಗಾರಿ ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದೆ.
ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರು ಮುತುವರ್ಜಿ ವಹಿಸಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಕೋರಿದ್ದರು. ತತ್ಪರಿಣಾಮ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾತಿ ಹಾಗೂ ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ನಿಗದಿತ ದರದಂತೆ ವಡವಿ ಗ್ರಾಮ ಬಳಿ ಡಿ.ಎನ್. ಡಬಾಲಿ ಅವರ 10 ಎಕರೆ ಭೂಮಿ ಖರೀದಿಸಲಾಯಿತು. ನಂತರ ಶಾಸಕರಾದ ರಾಮಣ್ಣ ಲಮಾಣಿ ಕಟ್ಟಡ ನಿರ್ಮಾಣಕ್ಕೆ 2020ರ ಜುಲೈ 18ರಂದು ಭೂಮಿಪೂಜೆ ನೆರವೇರಿಸಿದ್ದರು. ಅಲ್ಲಿಂದ ಈವರೆಗೆ ಕಾಮಗಾರಿ ನಡೆಯುತ್ತಲೇ ಇದೆ.
20 ಕೋಟಿ ರೂ. ವೆಚ್ಚದಲ್ಲಿ ಸಕಲ ಸೌಲಭ್ಯವುಳ್ಳ ಸದರಿ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾರ್ಯ 18 ತಿಂಗಳಲ್ಲಿ ಗುತ್ತಿಗೆದಾರ ಪೂರ್ಣಗೊಳಿಸಿ ಶಾಲೆ ಆರಂಭಕ್ಕೆ ಅನುಕೂಲ ಮಾಡಿಕೊಡಬೇಕಿತ್ತು. ಆದರೆ, ಮೂರು ವರ್ಷ ಕಳೆಯುತ್ತ ಬಂದರೂ ಕಣ್ಣಿಗೆ ರಾಚುತ್ತಿರುವ ನಿಧಾನಗತಿಯಲ್ಲಿನ ಕೆಲಸ ಕಂಡ ಗ್ರಾಮಸ್ಥರು ಶಾಲೆ ಆರಂಭ ಯಾವಾಗ ಎನ್ನುತ್ತಿದ್ದಾರೆ.