ವರದಿಯಲ್ಲಿ ಯುವಕನ ಸಾವು ಕಾರಣ ಬಹಿರಂಗ

Published on

ಕೊಳ್ಳೇಗಾಲ: ಪಟ್ಟಣದ ಅಚ್ಗಾಳ್ ಲಾಡ್ಜ್ ಹತ್ತಿರವಿರುವ ಸಿಲ್ಕ್ ಎಕ್ಸ್‌ಚೇಂಜ್ ಕಾಂಪೌಂಡ್ ಬಳಿ ಯುವಕನೊಬ್ಬ ಅನುಮಾನಾಸ್ಪಾದವಾಗಿ ಮೃತಪಟ್ಟ ವಿಚಾರವಾಗಿ ಚಾಮರಾಜನಗರ ಜಿಲ್ಲಾ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರು ವರದಿ ನೀಡಿದ್ದು, ಬಾಹ್ಯ ಹಾಗೂ ಆತಂರಿಕ ಗಾಯಗಳು ರಸ್ತೆ ಅಪಘಾತದಿಂದ ಉಂಟಾದವು ಎಂದು ವರಿದಿಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಸಂತೇಬೀದಿ ನಿವಾಸಿ ದೊರೆಸ್ವಾಮಿ ಅವರ ಮಗ ಹಾಗೂ ಕಬಾಬ್ ಅಂಗಡಿ ಮಾಲೀಕ ರಘು ಮೃತ ಯುವಕ.
ಫೆ.20ರಂದು ಬೆಳಗ್ಗೆ 7 ಗಂಟೆ ವೇಳೆಯಲ್ಲಿ ರಘು ಶವ ಪಟ್ಟಣದ ಸಿಲ್ಕ್ ಎಕ್ಸ್‌ಚೆಂಜ್ ಮುಂಭಾಗದ ಕಾಂಪೌಂಡ್ ಬಳಿ ದೊರೆತಿತ್ತು. ಈ ವಿಚಾರ ಮೃತನ ಅಣ್ಣನಿಂದ ಕುಟುಂಬಸ್ಥರಿಗೆ ತಿಳಿದು ಶವ ಸಂಸ್ಕಾರಕ್ಕಾಗಿ ಮನೆಗೆ ಮೃತದೇಹವನ್ನು ಒಯ್ದಿದ್ದರು. ಈ ವೇಳೆ ಸಂಪ್ರದಾಯದಂತೆ ಶವಕ್ಕೆ ಸ್ನಾನ ಮಾಡಿಸಲು ಮುಂದಾದಾಗ ರಘು ಹೊಟ್ಟೆಯ ಬಲಗಡೆಯಿಂದ ಎಡಗಡೆ ಭುಜದವರೆಗೆ ಕಂದಿದಂತಿದ್ದ ಗಾಯಗಳನ್ನು ಕಂಡು ಅನುಮಾನಗೊಂಡ ಮೃತನ ತಂದೆ ದೊರೆಸ್ವಾಮಿ ಪೊಲೀಸರಿಗೆ ಮಾಹಿತಿ ನೀಡಿ, ನನ್ನ ಮಗನ ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸಿ ಕ್ರಮ ವಹಿಸುವಂತೆ ಮನವಿ ಮಾಡಿದ್ದರು.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾವಿಗೆ ನಿಖರ ಕಾರಣ ತಿಳಿಯಲು ಶವವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದರು.

ಇದೀಗ ಚಾಮರಾಜನಗರ ಜಿಲ್ಲಾ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ವರದಿ ನೀಡಿದ್ದು, ಮೃತ ರಘು ಎದೆಯ ಮುಂಭಾಗದ ಗಾಯ ಭಾರಿ ವಾಹನದ ಟೈಯರ್ ಹೊರಮೈ ಮಾದರಿಗಳನ್ನು ಹೋಲುತ್ತದೆ. ಮೃತನ ಮೈ ಮೇಲೆ ಆಗಿರುವ ಬಾಹ್ಯ ಹಾಗೂ ಆಂತರಿಕ ಗಾಯಗಳು ರಸ್ತೆ ಅಪಘಾತದಿಂದ ಉಂಟಾದವು ಎಂದು ಪೊಲೀಸರಿಗೆ ವರದಿ ನೀಡಿದ್ದಾರೆ.

ಈ ಹಿನ್ನೆಲೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net