

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬಿಆರ್ಟಿಎಸ್ ಸಾರಿಗೆ ಸೇವೆಯಲ್ಲಿನ ಸಮಸ್ಯೆಗಳ ಸುಧಾರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯು ಭಾನುವಾರ ಜರುಗಿತು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಬಿಆರ್ಟಿಎಸ್ನಿಂದ ಜನರಿಗೆ ಎದುರಾಗಿರುವ ತೊಂದರೆಗಳ ನಿವಾರಣೆಗೆ ಎಇಎಸ್ಎಸ್ ಲೈ ಟ್ರ್ಯಾಮ್ ಸಾರಿಗೆ ಸಂಸ್ಥೆ ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ಖಾಸಗಿಯವರ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರು ಸಂಚರಿಸಬಹುದು ಎಂದರು.
ಸಂಚಾರದ ಎಲ್ಲ ನಿರ್ವಹಣೆಯನ್ನು ಸಂಸ್ಥೆ ಮಾಡುವುದರಿಂದ ಸರ್ಕಾರಕ್ಕೆ ಹೊರೆ ತಪ್ಪಲಿದೆ. ಹೀಗಾಗಿ ಬಿಆರ್ಟಿಎಸ್ನಿಂದ ಆಗುತ್ತಿರುವ ತೊಂದರೆ, ಅವುಗಳ ಪರಿಹಾರಕ್ಕೆ ಕ್ರಮಗಳೇನು?, ಇತರ ವಿಷಯಗಳ ಕುರಿತು ಜನರಿಂದ ಸಲಹೆ ಪಡೆಯಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಭೆ, ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
ಸಂಸ್ಥೆಯ ಅಧಿಕಾರಿ ಕಿಶೋರ ಮಾತನಾಡಿ, ಬಿಆರ್ಟಿಎಸ್ ಸಮಸ್ಯೆ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಮಾದರಿಯಾದ ಬಿಆರ್ಟಿಎಸ್ ಮಾರ್ಗದಲ್ಲಿ ಅಪಘಾತ ಸಂಭವಿಸಬಹುದಾದ 11 ಸ್ಥಳಗಳಿವೆ. ಸಿಗ್ನಲ್ ಸಮಸ್ಯೆ ಇದ್ದು, ಖಾಸಗಿ ವಾಹನಗಳು ಓಡಾಡಲು ತೊಂದರೆ ಎದುರಿಸುವಂತಾಗಿದೆ ಎಂದರು.
ಪಾಲಿಕೆ ಸದಸ್ಯ ಶಿವು ಹಿರೇಮಠ ಮಾತನಾಡಿ, ಹುಧಾ ಮಧ್ಯೆ ಖಾಸಗಿ ಸಹಭಾಗಿತ್ವದಲ್ಲಿ ಎಚ್ಇಎಸ್ಎಸ್ ಲೈ ಟ್ರ್ಯಾಮ್ ಸಾರಿಗೆ ಜಾರಿಗೆ ತರುವುದಾದರೆ, ಧಾರವಾಡ ಉನಗರ ಠಾಣೆಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದವರೆಗೆ ಫ್ಲೈ ಓವರ್ ನಿರ್ಮಿಸಿ ಬಸ್ಗಳನ್ನು ಓಡಿಸಬೇಕು ಎಂದರು.
ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ, ಬಳ್ಳಾರಿ ಸಂಸದ ತುಕಾರಾಮ, ಹುಡಾ ಅಧ್ಯ ಶಾಕೀರ್ ಸನದಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಇತರರು ಇದ್ದರು.
ಸಾರ್ವಜನಿಕರ ಅಸಮಾಧಾನಬಿಆರ್ಟಿಎಸ್ನಿಂದ ಖಾಸಗಿ ವಾಹನಗಳ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಬಹುತೇಕ ಕಡೆ ಸಂಚಾರ ನಿಯಮ ಪಾಲನೆ ಆಗುತ್ತಿಲ್ಲ. ಬಸ್ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ ಇದೆ. ಸಂಚಾರ ಪಥ ಸಾಕಷ್ಟು ಕಡೆ ಅವೈಜ್ಞಾನಿಕವಾಗಿದೆ. ಧಾರವಾಡ ಜುಬಿಲಿ ವೃತ್ತದಿಂದ ನವಲೂರುವರೆಗೆ ಹಾಗೂ ಹುಬ್ಬಳ್ಳಿ ಉಣಕಲ್ನಿಂದ ರೈಲು ನಿಲ್ದಾಣವರೆಗೆ ಮಿಕ್ಸಡ್ ಲೈನ್ ಸಂಚಾರಕ್ಕೆ ಅವಕಾಶ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.