

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ನವೀಕರಣಕ್ಕೆ ಸಂಬಂಧಿಸಿದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನಷ್ಟು ಚುರುಕು ಪಡೆದುಕೊಂಡಿವೆ.
ಕಳೆದ ಫೆಬ್ರವರಿಯಲ್ಲಿ ಹಂತ-1ರ ಭಾಗವಾಗಿ ನಿಲ್ದಾಣದ ಪೂರ್ವ ದಿಕ್ಕಿನ ಪ್ಲಾಟ್‌ಾರ್ಮ್-1ರ ಬದಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ನೆಲ ಅಂತಸ್ತು ಒಳಗೊಂಡಂತೆ ಆರು ಮಹಡಿಗಳ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ನಿರ್ಮಾಣದ ಕಾಮಗಾರಿ ಹಾಗೂ ನಿಲ್ದಾಣಕ್ಕೆ ಆಗಮನ/ನಿರ್ಗಮನ ಸ್ಥಳಕ್ಕೆ ರ‌್ಯಾಂಪ್ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.
ಸದ್ಯ ಯಶವಂತಪುರ ರೈಲ್ವೆ ನಿಲ್ದಾಣವು ಜನಭರಿತ ಸ್ಟೇಷನ್ ಆಗಿ ಮಾರ್ಪಟ್ಟಿದೆ. ಹೆಚ್ಚು ಪ್ರಯಾಣಿಕರ ದಟ್ಟಣೆ ತಪ್ಪಿಸಲು ಹಾಗೂ ವಾಹನಗಳ ಮೂಲಕ ನಿಲ್ದಾಣಕ್ಕೆ ಆಗಮನ ಹಾಗೂ ನಿರ್ಗಮನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ರೈಲ್ವೆ ನಿಲ್ದಾಣದ 14,800 ಚದರ ಮೀಟರ್ ವಿಸ್ತೀರ್ಣದಲ್ಲಿ ಏರ್‌ಪೋರ್ಟ್ ಮಾದರಿಯಲ್ಲಿ ಹವಾನಿಯಂತ್ರಿತ ಸೌಲಭ್ಯದೊಂದಿಗೆ ನಿರೀಕ್ಷಣಾ ಕೊಠಡಿಗಳು, ಆಹಾರ ಮಳಿಗೆ, ವ್ಯಾಪಾರ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಕಾಮಗಾರಿಯು ಹಸಿರು ಕಟ್ಟಡಗಳ ನಿರ್ಮಾಣ ನಿಯಮದಡಿ ಕೈಗೆತ್ತಿಕೊಳ್ಳಲಾಗಿದ್ದು, ಮಳೆನೀರು ಕೊಯ್ಲು, ತ್ಯಾಜ್ಯನೀರು ಸಂಸ್ಕೃಣಾ ಘಟಕ ಕೂಡ ನಿರ್ಮಾಣವಾಗಲಿದೆ. ನಿಲ್ದಾಣವು ಎಲ್‌ಇಡಿ ಲೈಟಿಂಗ್ ವ್ಯವಸ್ಥೆಯನ್ನು ಒಳಗೊಳ್ಳಲಿರುವುದು ಯೋಜನೆಯ ಪ್ರಮುಖ ಅಂಶವಾಗಿದೆ.
ಮೊದಲ ಹಂತದ ಕಾಮಗಾರಿ ಪೂರ್ನವಾದ ಬಳಿಕ ನಿಲ್ದಾಣದ ಪಶ್ಚಿಮ ದಿಕ್ಕಿನಲ್ಲಿ (ಮೆಟ್ರೋ ಬದಿ) ಕೆಲಸಗಳು ಆರಂಭವಾಗಲಿದೆ. ಈ ನಿಲ್ದಾಣದ ಎಲ್ಲ ಕಾಮಗಾರಿಗಳನ್ನು 2025ರ ಜುಲೈ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ. ಅಂದಾಜು 380 ಕೋಟಿ ರೂ. ವೆಚ್ಚ ಕಾಮಗಾರಿ ಹೊಣೆಯನ್ನು ದೆಹಲಿ ಮೂಲದ ಮೆ. ಗಿರಿಧಾರಿ ಲಾಲ್ ನಿರ್ಮಾಣ ಕಂಪನಿ ಗುತ್ತಿಗೆ ವಹಿಸಿಕೊಂಡಿದೆ. 2022ರ ಜೂನ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಲ್ದಾಣದ ನವೀಕರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.