

ಬೀಳಗಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೀಳಗಿ ತಾಲೂಕು ಘಟಕದ ವತಿಯಿಂದ ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅವಮಾನಿಸಿದ ಘಟನೆಯು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬ್ರಾಹ್ಮಣ ಸಮಾಜದ ಮುಖಂಡ ರಾವೇಂದ್ರಾಚಾರ್ಯ ಕಟ್ಟಿ ಮಾತನಾಡಿ, ಹಿಂದು ಸಮಾಜದಲ್ಲಿ ಬ್ರಾಹ್ಮಣರು ಸೇರಿ ವಿವಿಧ ಜಾತಿಯ ಬಂಧುಗಳನ್ನು ಸಾರ್ವಜನಿಕವಾಗಿ ಅವಮಾನಿಸುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಖಂಡನೀಯ. ತಪಾಸಣೆ ಕೈಗೊಳ್ಳಬೇಕಾದದ್ದು ಪರೀಕ್ಷೆ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ಕರ್ತವ್ಯ. ಅದಕ್ಕೆ ವಿದ್ಯಾರ್ಥಿಗಳೂ ಸಹಕರಿಸಬೇಕು ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ, ಜನಿವಾರವನ್ನು ಯಾವುದೇ ಕಾರಣಕ್ಕೂ ತೆಗೆಯುವಂತಿಲ್ಲ ಎಂಬ ನಿಯಮ ಧರ್ಮದಲ್ಲಿದೆ ಎಂದರು.
ಜನಿವಾರದಿಂದ ಪರೀಕ್ಷೆಯ ಯಾವುದೇ ನಿಯಮಗಳಿಗೆ ಧಕ್ಕೆಯೂ ಆಗುವುದಿಲ್ಲ. ಈ ಕನಿಷ್ಠ ಪ್ರಜ್ಞೆ ಇಲ್ಲದ ಸಿಬ್ಬಂದಿಯನ್ನು ಪರೀಕ್ಷೆ ಕರ್ತವ್ಯ ನಿರ್ವಹಣೆಗೆ ನೇಮಿಸಿರುವುದು ದುರಂತ. ಜನಿವಾರವನ್ನು ಯಜ್ಯೋಪವೀತ ಎಂದೂ ಕರೆಯಲಾಗುತ್ತದೆ. ಯಜ್ಞಗಳಲ್ಲಿ ಭಾಗವಹಿಸುವ ಅರ್ಹತೆ ಹೊಂದಲು ಉಪನಯನ ಸಂಸ್ಕಾರದಿಂದ ಇದನ್ನು ಧರಿಸಲಾಗುತ್ತದೆ ಎಂದರು.
ಗಲಗಲಿ ಪ್ರಸನ್ನ ನರಗುಂದ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಜಾತಿಯವರಿಗೆ ಅವಮಾನಿಸುವ ಕೆಲಸ ಯಾರೂ ಮಾಡಬಾರದು. ಸಿಇಟಿ ಪರೀಕ್ಷೆ ವೇಳೆಯಲ್ಲಿ ಜನಿವಾರಕ್ಕೆ ಕತ್ತರಿಹಾಕಿದ್ದು ಇಂದು ಖಂಡನೀಯ. ಬ್ರಾಹ್ಮಣರ ಪಾಲಿಗೆ ಸಮಸ್ತ ಸಮಾಜದ ಹಿತ ಬಯಸುವುದು ಕೂಡ ಒಂದು ಯಜ್ಞ ಆಗಿದೆ. ಇಂಥ ವಿಶಾಲ ಮನೋಭಾವದಿಂದ ಪವಿತ್ರವಾಗಿ ಧರಿಸುವ ಯದ್ಯೋಪವೀತಕ್ಕೆ ಅವಮಾನಿಸಿದ ಘಟನೆ ಖಂಡನೀಯ. ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಇದಕ್ಕೆ ಅಡ್ಡಿಪಡಿಸಿ ಪರೀಕ್ಷೆ ಬರೆಯುವುದನ್ನು ತಡೆದದ್ದು ಅಸಹನೀಯ. ಭಾರತದ ಸಂವಿಧಾನ ಎಲ್ಲ ಸಮಾಜದವರಿಗೂ ಅವರವರ ಧರ್ಮದಂತೆ ಬದುಕಲು ಅವಕಾಶ ನೀಡಿದೆ. ಈ ಘಟನೆಯಿಂದ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ.
ಹಿಂದು ಸಮಾಜದ ಯಾವುದೇ ಪಂಗಡದವರ ಧಾರ್ಮಿಕ ಮನೋಭಾವಕ್ಕೆ ಧಕ್ಕೆ ಯಾಗುವ ಇಂಥ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಅವಮಾನಕ್ಕೊಳಗಾದ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಅವರಿಗೆ ಮುಂದಿನ ಕಲಿಕೆಗೆ ಬೇಕಾದ ಅಗತ್ಯ ಸೀಟು ಹಂಚಿಕೆ ಮಾಡಬೇಕು. ಇಂತಹ ಘಟನೆಗಳು ಮರುಕಳಿಸಿದರೆ ಸಮಸ್ತ ಸಮಾಜ ಬಾಂಧವರು ಸೇರಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೀಳಗಿ ತಾಲೂಕು ಘಟಕದ ವತಿಯಿಂದ ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅವಮಾನಿಸಿದ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ತಾಲೂಕು ದಂಡಾಧಿಕಾರಿಗಳ ಪರವಾಗಿ ಗ್ರೇಡ್-2 ತಹಸೀಲ್ದಾರ್ ಆನಂದ ಕೋಲಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಅನೀಲ ರಾಘವೇಂದ್ರರಾವ ಹಲ್ಯಾಳ, ಆರ್.ಎಚ್. ಕುಲಕರ್ಣಿ, ಎಚ್.ಎಸ್. ಸೋನ್ನ, ಅಶೋಕ ಜ್ಯೋಶಿ, ವಿನೋದ ದಿಕ್ಷೀತ, ಭೀಮರಾಯ ದೇಶಪಾಂಡೆ, ಪ್ರಮೋದ ದೇಶಪಾಂಡೆ, ಅರವಿಂದ ಕಟ್ಟಿ, ಭಗವಾನ ಸೋನ್ನ ಶಂಕರ ದಿಕ್ಷೀತ, ಮಂಜು ಪತ್ತಾರ, ಅನೀಲ ಬಡಿಗೇರ, ವಿಠ್ಠಲ ನಿಂಬಾಳ್ಕರ, ರಾಜು ಬೋರ್ಜಿ, ಶಿವಾಜಿ ಚವಾಣ ಇದ್ದರು.