‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾ ಬಿಡುಗಡೆ, ಪ್ರತೀಕ್ ಶೆಟ್ಟಿ ನಾಯಕನಾಗಿರುವ ಕನ್ನಡ ಸಿನಿಮಾ, ನಿರ್ಮಾಪಕ ವರುಣ್ ಹೆಗ್ಡೆ ಮಾಹಿತಿ

nimmellara
Published on

ಮಂಗಳೂರು: ವರುಣ್ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಮೂಡಿಬಂದಿರುವ ‘ನಿಮ್ಮೆಲ್ಲರ ಆಶೀರ್ವಾದ’ ಕನ್ನಡ ಸಿನಿಮಾ ಜುಲೈ 21ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕ ವರುಣ್ ಹೆಗ್ಡೆ ತಿಳಿಸಿದ್ದಾರೆ.
 ಕನ್ನಡದ ಮೇರು ನಟಿ ಎಂ.ಎನ್.ಲಕ್ಷ್ಮೀದೇವಿ, ಮೈಮ್ ರಾಮ್‌ದಾಸ್, ಸ್ವಾತಿ ಗುರುದತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ, ಸದಾಶಿವ ಅಮೀನ್, ಖಳನಟನಾಗಿ ಕೆಜಿಎಫ್ ಖ್ಯಾತಿಯ ದಿನೇಶ್ ಮಂಗಳೂರು ಅಭಿನಯಿಸಿದ್ದಾರೆ. ರವಿಕಿರಣ್ ಕತೆ- ನಿರ್ದೇಶನ, ಶರವಣನ್ ಜಿ.ಎನ್. ಛಾಯಾಗ್ರಹಣ, ರಾಷಟ್ರೆ ಪ್ರಶಸ್ತಿ ವಿಜೇತ ಸುರೇಶ್ ಆರುಮುಗಮ್ ಸಂಕಲನ, ಸುನಾದ್ ಗೌತಮ್ ಸಂಗೀತ, ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ ಚಿತ್ರದಲ್ಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ನಾಯಕ ನಟ ಪ್ರತೀಕ್ ಶೆಟ್ಟಿ ಮಾತನಾಡಿ, ಇದು ಹೊಸಬರ ವಿಭಿನ್ನ ಪ್ರಯತ್ನವಾಗಿದ್ದು ಒಂದೊಳ್ಳೆ ಕತೆ ಸಿನಿಮಾದ ಜೀವಾಳವಾಗಿದೆ. ಚಿತ್ರತಂಡದಲ್ಲಿ ಬಹುತೇಕ ಹೊಸ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಎಂಜಾಯ್ ಮಾಡಿಕೊಂಡು ನಟಿಸಿದ್ದೇವೆ. ನೀವೆಲ್ಲರೂ ಆಶೀರ್ವಾದ ಮಾಡಿದರೆ ನಾವು ಇನ್ನಷ್ಟು ಹೊಸ ಪ್ರಯತ್ನಗಳ ಮೂಲಕ ನಿಮ್ಮನ್ನು ರಂಜಿಸಲಿದ್ದೇವೆ ಎಂದರು.
 ಹಿರಿಯ ಕಲಾವಿದ ನಟ ಅರವಿಂದ್ ಬೋಳಾರ್, ಬಹುತೇಕ ಸಿನಿಮಾಗಳಲ್ಲಿ ಕಲಾವಿದರಿಗೆ ಪೇಮೆಂಟ್ ಕೊಡುತ್ತಾರೆ; ಆದರೆ ನಿರೀಕ್ಷೆಯಷ್ಟು ಗೌರವ ಸಿಗುವುದಿಲ್ಲ. ಆದರೆ ಈ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಸರ್ವಧರ್ಮದ ಚಿತ್ರಪ್ರೇಮಿಗಳು ನಮ್ಮನ್ನು ಬೆಂಬಲಿಸಿ ಸಿನಿಮಾ ನೋಡಿ ಹರಸಬೇಕು. ಹೊಸಬರ ಹೊಸ ಪ್ರಯತ್ನ ಗೆಲ್ಲಬೇಕು ಎಂದರು.
 ಮೈಮ್ ರಾಮ್‌ದಾಸ್, ವಾಲ್ಟರ್ ನಂದಳಿಕೆ, ನಿರ್ಮಾಪಕ ಉದಯ್ ಕುಮಾರ್ ಹೆಗ್ಡೆ, ನಿರ್ದೇಶಕ ರವಿಕಿರಣ್, ಪುರುಷೋತ್ತಮ್ ಭಂಡಾರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
 ಕರಾವಳಿ ಸೊಗಡಿನ ಕಥೆ
 ಸುಂದರ ಕರಾವಳಿಯ ಸೊಗಡಿನ ಒಳ್ಳೆಯ ಜನರಿರುವ ಒಂದು ಸಣ್ಣ ಊರು, ಆ ಊರಿನ ಒಬ್ಬ ಪೊಲೀಸ್ ಅಧಿಕಾರಿ ಸಿನಿಮಾದ ನಾಯಕ ‘ಆಶೀರ್ವಾದ್’. ಅವನು ಹಲವು ಏಳುಬೀಳುಗಳನ್ನು ಕಂಡು ಹೇಗೆ ಪೊಲೀಸ್ ಆದ ಎನ್ನುವುದೇ ಕಥೆ. ಜೊತೆಗೆ ಪಾಯಲ್ ರಾಧಾಕೃಷ್ಣ ಹಾಗೂ ಆಶೀರ್ವಾದ್‌ನ ನಡುವಿನ ಸುಂದರ ಪ್ರೇಮಕಥೆ ಇದರಲ್ಲಿದೆ ಎಂದು ನಿರ್ದೇಶಕ ರವಿಕಿರಣ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net