

ಬೇಲೂರು : ಬಹುಸಂಖ್ಯಾತ ಲಿಂಗಾಯತರಲ್ಲಿ ಹೊಂದಾಣಿಕೆ ಕೊರತೆಯಿಂದ ಲಿಂಗಾಯತ ಸಮಾಜದ ಆಚಾರ, ವಿಚಾರಗಳು ಮತ್ತು ಇಷ್ಟಲಿಂಗ ಪರಿಕಲ್ಪನೆ ಬೇಕಿಲ್ಲವೇನೋ ಎನಿಸುತ್ತಿದೆ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಲ್ಲಿ ಗುರುವಾರ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಶ್ರೀಗಳ ಪಾದಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಲಿಂಗಾಯತ ಸಮಾಜಕ್ಕೆ ತನ್ನದೇ ಆದ ಮನ್ನಣೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜ ಕುಗ್ಗುತ್ತಿರುವುದು ವಿಪರ್ಯಾಸದ ಸಂಗತಿ. ಲಿಂಗಾಯತ ಧರ್ಮದ ಆಚಾರ, ವಿಚಾರಗಳನ್ನು ಮರೆಯುತ್ತಿದ್ದಾರೆ. ಲಿಂಗವನ್ನು ಧರಿಸಿದರೆ ಮಾತ್ರ ಲಿಂಗಾಯತರಾಗುತ್ತಾರೆ. ಆದರೆ ಇಷ್ಟ ಲಿಂಗದ ಪರಿಕಲ್ಪನೆ ಯಾರಿಗೂ ಬೇಕಾಗಿಲ್ಲ. ವಿಶೇಷವಾಗಿ ನಾವುಗಳು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದರು.
ಹಾಸನ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಅರಿವು, ಅಚಾರ, ವಿಚಾರ, ಅನುಭವ ಅತ್ಯಗತ್ಯ. ನಡೆ-ನಡಿಯ ಶುದ್ಧತೆ ಕೂಡ ಪ್ರಾಮುಖ್ಯತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಸಿದ್ಧಗಂಗಾಶ್ರೀ ತಮ್ಮ ಜೀವಿತಾವಧಿಯಲ್ಲಿ ಕೈಗೊಂಡ ತ್ರಿವಿಧ ದಾಸೋಹದಿಂದ ಕೋಟ್ಯಂತರ ಜನರಿಗೆ ಸಹಕಾರಿಯಾಗಿದೆ. ಅವರು ನಡೆದಾಡುವ ದೇವರಾಗಿ, ನಡೆ-ನುಡಿಯ ದೇವರಾಗಿದ್ದಾರೆ. ಅಜ್ಞಾನದಿಂದ ಸುಜ್ಞಾನದ ಕಡೆ ಮಾರ್ಗದರ್ಶನ ಮಾಡಿದ ಹೆಗ್ಗಳಿಕೆಗೆ ಸಿದ್ಧಗಂಗಾಶ್ರೀಗಳ ಕಾರ್ಯ ಅಗಮ್ಯವಾಗಿದೆ ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಸಿದ್ಧಗಂಗಾಶ್ರೀಗಳು ತ್ರಿವಿಧ ದಾಸೋಹದ ಮೂಲಕ ಜಾತಿ, ಧರ್ಮ ಭೇದವಿಲ್ಲದೆ ಸದೃಢ ಸಮಾಜ ಕಟ್ಟುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ. ಆದರೆ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಲು ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ ಎಂದರು.
ಕೋಡ್ಲಿಪೇಟೆ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ, ಶಾಸಕ ಎಚ್.ಕೆ.ಸುರೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಡಾ.ಶಿವಕುಮಾರ ಸ್ವಾಮೀಜಿ ಟ್ರಸ್ಟ್ ಅಧ್ಯಕ್ಷ ಬಿ.ಪಿ.ಧರಣೇಂದ್ರ, ಉದ್ಯಮಿ ರಾಜಶೇಖರ್, ಬಿಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅಡಗೂರು ಬಸವರಾಜು, ಮಾಜಿ ಅಧ್ಯಕ್ಷರಾದ ನಿಂಗರಾಜ್, ರವಿಕುಮಾರ್, ಮುಖಂಡರಾದ ಸಂತೋಷ, ಚೇತನ್, ಬಿ.ಕೆ.ಚಂದ್ರಕಲಾ, ಅದ್ದೂರಿ ಚೇತನ್. ಕೌರಿ ರಾಜಶೇಖರ್, ಪುಟ್ಟಸ್ವಾಮಿ ಸೇರಿದಂತೆ ಇತರರಿದ್ದರು.