

ಮೈಸೂರು: ಮಹಿಳೆಯರಲ್ಲಿ ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿದ್ದು, ಬ್ಯೂಟಿಷಿಯನ್ ಮತ್ತು ಹೊಲಿಗೆ ವೃತ್ತಿಗೆ ಉತ್ತಮ ಅವಕಾಶಗಳು ದೊರೆಯುತ್ತಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕ ನಿರ್ದೇಶಕಿ ನಾಗಜ್ಯೋತಿ ಹೇಳಿದರು.
ಕುವೆಂಪುನಗರದಲ್ಲಿರುವ ಕರುಣೆ ಸೇವಾ ಟ್ರಸ್ಟ್‌ನಿಂದ ವಿಶ್ವ ಸೌಂದರ್ಯ ದಿನದ ಅಂಗವಾಗಿ ಇತ್ತೀಚೆಗೆ ಬ್ಯೂಟಿಷಿಯನ್ ತರಬೇತಿದಾರರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವಉದ್ಯೋಗ ಪ್ರಾರಂಭಿಸಿ, ಸಮಾಜದ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಿರಬೇಕು. ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿರಬೇಕೆನ್ನುವ ಹಂಬಲವಿದೆ. ದೇವರು ಕೊಟ್ಟ ನಮ್ಮ ರೂಪಕ್ಕೆ ಮೆರುಗು ಕೊಡುವ ಕೆಲಸ ಬ್ಯೂಟಿ ಪಾರ್ಲರ್‌ಗಳ ಮೂಲಕ ನಡೆಯುತ್ತಿದೆ. ತಾನು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಆರಂಭಿಸಿರುವ ಮಹಿಳೆಯರ ಸಾಧನೆಯನ್ನು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾಭರತ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬ್ಯೂಟಿಷಿಯನ್ ಮಾರ್ಗ ಸಹಕಾರಿಯಾಗಿದ್ದು, ಗ್ರಾಹಕರ ಸಂತೃಪ್ತಿಯೆ ನಮ್ಮ ಧ್ಯೇಯ, ಹೀಗಾಗಿ ಗ್ರಾಹಕರಿಗೆ ತೃಪ್ತಿಕರವಾದ ಸೇವೆ ನೀಡಬೇಕು ಎಂದು ಹೇಳಿದರು.
ಪತ್ರಕರ್ತೆ ಸಹನಾ ಮಾತನಾಡಿ, 21ನೇ ಶತಮಾನದ ವೈಜ್ಞಾನಿಕ ಯುಗದಲ್ಲಿ ಮಹಿಳೆ ಪುರುಷನಷ್ಟೇ ಸಮರ್ಥಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಗರ-ಗ್ರಾಮೀಣ ಪ್ರದೇಶವೆನ್ನದೆ ಸೌಂದರ್ಯ ಪ್ರಜ್ಞೆ ಎಲ್ಲ ವಯೋಮಾನದ ಮಹಿಳೆಯರಲ್ಲಿ ಮೂಡುತ್ತಿದೆ. ಬ್ಯೂಟಿಪಾರ್ಲರ್ ಉತ್ತಮ ಬೇಡಿಕೆಯ ಉದ್ಯಮವಾಗಿದೆ. ಮಹಿಳೆಯರು ಕೂಡ ಯಶಸ್ವಿ ಉದ್ಯಮಿಗಳಾಗಲು ಅವಕಾಶ ಇದೆ ಎಂದರು.
ತರಬೇತುದಾರರಾದ ಪ್ರಮೀಳಾ ಭರತ್, ರಾಧಿಕಾ, ಉಮಾ ಜಾದವ್, ಶಾಂತಗೌಡ, ಶಶಿಕಲಾ, ಪೃಥ ಬಿಕ್ಕೆಮನೆ ಅವರನ್ನು ಸನ್ಮಾನಿಸಲಾಯಿತು. ಅಥರ್ವ ಫೌಂಡೇಶನ್ ಅಧ್ಯಕ್ಷೆ ಪುಷ್ಪಲತಾ, ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷೆ ರುಕ್ಮಿಣಿ, ಮುಖಂಡರಾದ ಸವಿತಾ, ಅನುಷಾ, ಚಾರುಲತಾ, ಪ್ರಿಯಾಂಕಾ ಇತರರು ಇದ್ದರು.