

ವಿಜಯವಾಣಿ ಸುದ್ದಿಜಾಲ ಉಡುಪಿ
ಕೆಲಸ ಮಾಡುವ ಒಳ್ಳೆಯ ಕನಸಿನೊಂದಿಗೆ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದೇನೆ. ಗೆಲುವು ಲಭಿಸಿದರೆ ಪ್ರತಿ ಜಿಲ್ಲೆಯಲ್ಲೂ ಪದವೀಧರರ ಭವನ ನಿರ್ಮಿಸಲಾಗುವುದು. ಇಲ್ಲಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ, ತರಬೇತಿ ಹಾಗೂ ಉದ್ಯೋಗ ಸಂಬಂಧಿತ ಕೆಲಸಗಳಿಗೆ ಉಚಿತ ಸೇವೆ, ಸೌಲಭ್ಯ ನೀಡಲಾಗುವುದು ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ, ನ್ಯಾಯವಾದಿ ಎಸ್.ಪಿ. ದಿನೇಶ್ ತಿಳಿಸಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2012 ಹಾಗೂ 2018 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದೆ. ಕಳೆದ 10 ತಿಂಗಳಿಂದ ಈ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಕೊನೆಯ ಕ್ಷಣದಲ್ಲಿ ಕಾಣದ ಕೈಗಳ ಕೈವಾಡದಿಂದ ಕಾಂಗ್ರೆಸ್ ಟಿಕೆಟ್ ತಪ್ಪಿತು. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.
2102ರಲ್ಲಿ ಹಾಗೂ 2018ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಅತ್ಯಲ್ಪ ಮತದಿಂದ ಸೋಲು ಕಂಡಿದ್ದೆ. ಈ ಬಾರಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದು, ಇದು ಕಾಂಗ್ರೆಸ್ಗೆ ಬಂಡಾಯವಲ್ಲ. ಅವರ ಅಭ್ಯರ್ಥಿಯ ವಿರುದ್ಧ ನನ್ನ ಬಂಡಾಯ. ಪಾಂತರಿಯ ವಿರುದ್ಧ ನನ್ನ ಬಂಡಾಯ. ಈ ಹಿಂದೆ ಪದವೀಧರರ ಕ್ಷೇತ್ರದಿಂದ ಏನೂ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ವಿಧಾನಸಭೆಗೆ ಹೋಗುತ್ತೇನೆ ಎಂದು ಎಂಎಲ್ಸಿ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ತೆರಳಿ, ಮತ್ತೀಗ ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ನನ್ನ ಬಂಡಾಯ ಸ್ಪರ್ಧೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಈಶ್ವರ್ ಎನ್., ಸುರೇಶ್ ಪೂಜಾರಿ ಇದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಎಐಸಿಸಿ ಕಾರ್ಯದರ್ಶಿ ಮಯೂರ್ ಜೈಕುಮಾರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಇವರೆಲ್ಲ ನಮ್ಮ ಮನೆಗೆ ಬಂದಿದ್ದಲ್ಲದೆ, ಫೋನ್ ಮೂಲಕವೂ ಮಾತನಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು. ಆದರೆ, ನಾನು ನಾಮಪತ್ರ ಹಿಂತೆಗೆದುಕೊಳ್ಳುತ್ತಿಲ್ಲ. ಅವರೆಲ್ಲ ನನ್ನ ನೆಚ್ಚಿನ ನಾಯಕರು. ಹೀಗಾಗಿ ಮಾಧ್ಯಮದ ಮೂಲಕ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಎಸ್.ಪಿ. ದಿನೇಶ್ ತಿಳಿಸಿದರು.