

ಶಿವಮೊಗ್ಗ: ನಮ್ಮ ವಿಜ್ಞಾನಿಗಳ ಅಚಲ ಆತ್ಮವಿಶ್ವಾಸ, ನಮ್ಮ ತಂತ್ರಜ್ಞಾನದ ಶ್ರೇಷ್ಠತೆಯಿಂದ ನಾವು ಚಂದ್ರನ ಅಂಗಳದಲ್ಲಿ ಸುಸೂತ್ರವಾಗಿ ಕಾಲಿಟ್ಟಿದ್ದೇವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಸ್ರೋ ವಿಜ್ಞಾನಿಗಳು ರಾಷ್ಟ್ರಭಕ್ತಿ, ಸಾಹಸ, ಪ್ರಾಮಾಣಿಕತೆ ಮತ್ತು ಕಾಯಕ ಸಂಸ್ಕೃತಿ ವಿಷಯದಲ್ಲಿ ಇಡೀ ದೇಶಕ್ಕೇ ಆದರ್ಶ ಪ್ರಾಯರಾಗಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದು ಭಾರತದ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿದ್ದಾರೆ. ಭಾರತದತ್ತ ಇಡೀ ಪ್ರಪಂಚ ಬೆರಗಿನಿಂದ ನೋಡುವಂತೆ ಮಾಡಿದ್ದೀರಿ, ಭಾರತವನ್ನು ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿಸಿದ್ದಾರೆ ಎಂದು ಬಣ್ಣಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿ ಆಧುನಿಕ ಭಾರತ ನಿರ್ಮಾಣ ಕಾರ್ಯದಲ್ಲಿ ಪ್ರಧಾನಿ ಮೋದಿ ಅವರಿಗೆ ಮೊದಲಿನಿಂದಲೂ ವಿಶೇಷ ಆಸಕ್ತಿ. ಮೋದಿ ಅವರ ಆಡಳಿತದಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಪ್ರಾಶಸ್ತಯ ಪಡೆದಿವೆ ಎಂದು ವಿದೇಶಿ ಮಾಧ್ಯಮಗಳು ಈಗಾಗಲೇ ಶ್ಲಾಘಿಸಿವೆ. ಚಂದ್ರಯಾನದ ಪ್ರತಿ ಹಂತದ ಬೆಳವಣಿಗೆಯ ಮೇಲೂ ಪ್ರಧಾನಿ ಮೋದಿ ಅವರು ಖುದ್ದಾಗಿ ನಿಗಾ ವಹಿಸುತ್ತಾ ಬಂದಿದ್ದಾರೆ. ಇಂತಹ ಮಹತ್ತರವಾದ ಕಾರ್ಯಕ್ರಮಗಳ ಮೂಲಕವೇ ದೇಶದ ದೃಢತೆ, ಶಕ್ತಿ ಮತ್ತು ಸಾಮರ್ಥ್ಯಗಳ ಅಭಿವ್ಯಕ್ತಿ ಸಾಧ್ಯ ಎನ್ನುವುದು ಅವರ ಅಚಲವಾದ ನಂಬಿಕೆ ಎಂದು ಹೇಳಿದ್ದಾರೆ.