ಮಂಗಳೂರು ಸ್ಮಾರ್ಟ್‌ಸಿಟಿಯ ಕಳಪೆ ಕಾಮಗಾರಿಯ ನೈಜ ಚಿತ್ರಣ ಬಯಲು

mng--23 june smartcity
Published on

ಮಂಗಳೂರು: ಸ್ಮಾರ್ಟ್‌ಸಿಟಿ ಕೋಟ್ಯಂತರ ರೂಪಾಯಿ ವಿನಿಯೋಗಿಸಿ ನಗರದ ವಿವಿಧ ಕಡೆ ಕಾಮಗಾರಿಗಳನ್ನು ನಡೆಸಿದೆ. ಆ ಕಾಮಗಾರಿಗಳು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ನಡೆದಿವೆ ಎಂಬುದು ಒಂದೊಂದಾಗಿ ಸಾರ್ವಜನಿಕರಿಗೆ ದರ್ಶನವಾಗುತ್ತಿದೆ.


ಇದು ಸ್ಟೇಟ್‌ಬ್ಯಾಂಕ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಿಂದ ವಾಣಿಜ್ಯ ಕೇಂದ್ರ ಹಳೇ ಬಂದರಿಗೆ ಸಾಗುವ ನೆಲ್ಲಿಕಾಯಿ ರಸ್ತೆ. ಈ ರಸ್ತೆಯನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಕಾಮಗಾರಿ ನಡೆದು ಕೆಲವೇ ಸಮಯದಲ್ಲಿ ಫುಟ್‌ಪಾತ್‌ಗೆ ಹಾಕಿರುವ ಇಂಟರ್‌ಲಾಕ್‌ಗಳು ಎದ್ದು ಹೋಗಲಾರಂಭಿಸಿದೆ. ಎದ್ದು ನಿಂತ ಇಂಟರ್‌ಲಾಕ್‌ಗಳಿಂದ ಪಾದಚಾರಿಗಳು ಎಡವಿ ಬೀಳುವ ಸ್ಥಿತಿ ಉಂಟಾಗಿದೆ. ಫುಟ್‌ಪಾತ್‌ಗಳಿಗೆ ಹಾಕಿದ ಚೇಂಬರ್‌ಗಳು ಮುರಿದು ಹೋಗಿವೆ. ಪಾದಚಾರಿಗಳು ಇದರ ಮೇಲೆ ಕಾಲಿಟ್ಟರೆ ಚರಂಡಿಯ ಒಳಗಡೆ ಬೀಳುವುದು ಖಚಿತ. ರಾತ್ರಿ ವೇಳೆ ಇಲ್ಲಿ ನಡೆಯುವುದು ಇನ್ನೂ ಅಪಾಯಕಾರಿ.


ಕದ್ರಿ ಪಾರ್ಕ್ ಬಳಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಅಂಗಡಿ ಕೋಣೆಗಳು ಏಲಂ ಮಾಡದೆ ಧೂಳು ತಿನ್ನುತ್ತಿವೆ. ಅತ್ಯಾಧುನಿಕ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಇಲ್ಲದೆ ಭೂತ ಬಂಗಲೆಗಳಾಗುತ್ತಿವೆ. ಕಾಂಕ್ರೀಟು ರಸ್ತೆಗಳನ್ನು ಹಾಕಿದ ವಾರದಲ್ಲೇ ಅಗೆದ ಅದೆಷ್ಟೋ ಉದಾಹರಣೆಗಳಿವೆ. ಸಾರ್ವಜನಿಕರ ತೆರಿಗೆಯ ಹಣ ಸುರಿದು ಕಾಮಗಾರಿ ಹೆಸರಲ್ಲಿ ಕೋಟಿಗಟ್ಟಲೆ ರೂಪಾಯಿ ಬಿಲ್ ಮಾಡಲಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸದೆ ಬಿಲ್ ಪಾಸ್ ಮಾಡಿ ಯಾರ‌್ಯಾರೋ ಕಿಸೆ ತುಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕುವವರಾರು ಎಂಬುದೇ ಪ್ರಶ್ನೆ.


ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಎಲ್ಲರಿಗೂ ಗೊತ್ತಿದೆ. ಫುಟ್‌ಪಾತ್‌ನಲ್ಲಿ ಮುರಿದು ಬಿದ್ದಿರುವ ಚೇಂಬರನ್ನು ತಕ್ಷಣ ಸರಿಪಡಿಸಿ ನಾಗರಿಕರ ಪ್ರಾಣ, ಕೈ ಕಾಲು ಅಪಾಯಕ್ಕೀಡಾಗದಂತೆ ನೋಡಿಕೊಳ್ಳಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಆಡಳಿತಕ್ಕೆ ಇಲ್ಲದೇ ಇರುವುದು ಖೇದಕರ. ಹೊಸ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವುದು, ಅಗೆಯುವುದು, ಬಿಲ್ ಮಾಡುವ ಕಾಯಕದಲ್ಲೇ ತೊಡಗಿದ್ದಾರೆ. ಈಗ ರಿಪೇರಿ ಮಾಡದಿದ್ದರೆ, ಚೇಂಬರ್ ಗೆ ಕಾಲಿಟ್ಟು ಗುಂಡಿಗೆ ಬಿದ್ದು, ಇಂಟರ್ ಲಾಕ್ ಎಡವಿ ರಸ್ತೆಗೆ ಬಿದ್ದು ಕೈಕಾಲು ಮುರಿದವರನ್ನು ಎತ್ತಿಕೊಂಡು ನಗರ ಪಾಲಿಕೆ ಕಚೇರಿ ಮುಂಭಾಗ ಧರಣಿ ಕೂರಲಾಗುವುದು ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net