ಭಯದಲ್ಲೇ ನಡೆಯಿತು ಮರುಮತದಾನ

29 HANUR 1 B
ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಮೆಂದಾರೆ ಗ್ರಾಮದ ಗಿರಿಜನರು ಮತ ಚಲಾಯಿಸಿದರು.
Published on

ಹನೂರು : ಬಂಧನದ ಭೀತಿಯಲ್ಲಿ ಜನರು ಊರನ್ನೇ ತೊರೆದಿರುವ ಗ್ರಾಮದಲ್ಲಿ ನೀರವ ಮೌನ. ಮತ ಚಲಾಯಿಸಬೇಕು ಎನ್ನುವ ಆಸೆಯಿದ್ದರೂ ಭಯದಿಂದ ಮನೆಯಲ್ಲಿಯೇ ಉಳಿದ ಮಹಿಳೆಯರು… ಬಹುತೇಕ ಮನೆಗಳಿಗೆ ಬಿದ್ದಿತ್ತು ಬೀಗ… ಪಾಲಕರಿಲ್ಲದೇ ಮಕ್ಕಳಲ್ಲಿ ಆವರಿಸಿತ್ತು ಒಂಟಿತನ… ಇತ್ತ ಭಯದಲ್ಲೇ ಪೊಲೀಸರ ಬಂದೋಬಸ್ತ್‌ನಲ್ಲಿ ಮತ ಚಲಾಯಿಸಿದ ಜನರು…

ಇದು ಮತಗಟ್ಟೆ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಮರು ಮತದಾನದಂದು ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ ಕಂಡು ಬಂದ ವಾಸ್ತವ ಚಿತ್ರಣ.

ಏ.26 ರಂದು ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 146ರಲ್ಲಿ ಗ್ರಾಮಸ್ಥರು ಅಗತ್ಯ ಮೂಲ ಸೌಕರ್ಯವನ್ನು ಒದಗಿಸದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿ ಸುಮಾರು 150 ರಿಂದ 200 ಜನರ ಗುಂಪು ಮತಗಟ್ಟೆಯನ್ನು ಧ್ವಂಸಗೊಳಿಸಿದ್ದರು. ಈ ವೇಳೆ ಕಲ್ಲು ತೂರಾಟದಿಂದ ಅಧಿಕಾರಿಗಳು, ಪೊಲೀಸರು ಹಾಗೂ ಮೆಂದಾರೆ ಗ್ರಾಮದ 15ಕ್ಕೂ ಹೆಚ್ಚು ಗಿರಿಜನರು ಗಾಯಗೊಂಡಿದ್ದರು. ಸಂಬಂಧಪಟ್ಟವರ ವಿರುದ್ಧ ಗಿರಿಜನರು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಅಧಿಕಾರಿಗಳು ಸಹ ದೂರು ನೀಡಿದ್ದರು. ಈ ಘಟನೆಗೆ ಸಂಬಂಧಿಸಿದ ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದರಿಂದ ಬಂಧನದ ಭೀತಿಗೆ ಒಳಗಾದ ಮಹಿಳೆಯರು ಸೇರಿದಂತೆ ಗ್ರಾಮದ ಬಹುತೇಕ ಜನರು ಊರನ್ನೇ ತೊರೆದಿದ್ದಾರೆ.

ಚುನಾವಣೆ ಆಯೋಗದ ಆದೇಶದಂತೆ ಸೋಮವಾರ ಬಿಗಿ ಬಂದೋಬಸ್ತ್‌ನಲ್ಲಿ ಮರು ಮತದಾನ ನಡೆಯಿತು. ಮತಗಟ್ಟೆಗೆ ಆಗಮಿಸಿದ ಜನರಲ್ಲಿ ಆತಂಕ ಮನೆ ಮಾಡಿತ್ತು. ಮತ ಚಲಾಯಿಸಿ ಮತಗಟ್ಟೆಯಿಂದ ಮನೆಗೆ ತೆರಳಿದರೆ ಸಾಕು ಎನ್ನುವ ಭಾವನೆ ಮತದಾರರಲ್ಲಿತ್ತು. ಇತ್ತ ಗ್ರಾಮದಲ್ಲಿ ಜನರಿಲ್ಲದ ಪರಿಣಾಮ ಬೀದಿಗಳು ಬಿಕೋ ಎನ್ನುತ್ತಿತ್ತು.

ಗ್ರಾಮದಲ್ಲಿ ನೀರವ ಮೌನ: ಇಂಡಿಗನತ್ತ ಗ್ರಾಮದಲ್ಲಿ 132 ಕುಟುಂಬಗಳಿದ್ದು, 781 ಜನಸಂಖ್ಯೆಯಲ್ಲಿ 450ಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ ಮತಗಟ್ಟೆ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ಘಟನೆಯಲ್ಲಿ ಭಾಗಿಯಾಗಿದವರು ಸೇರಿದಂತೆ ಬಹುತೇಕ ಜನ ಊರನ್ನೇ ತೊರೆದಿದ್ದಾರೆ. ಘಟನೆಯಲ್ಲಿ ಭಾಗಿಯಾಗದ ಕೆಲವರು ಮಾತ್ರ ಮನೆಯಲ್ಲಿಯೇ ಉಳಿದಿದ್ದರು. ಜತೆಗೆ ಕೆಲವು ಮನೆಗಳಲ್ಲಿ ವೃದ್ಧರು ಹಾಗೂ ಮಕ್ಕಳು ಮಾತ್ರ ವಾಸವಾಗಿದ್ದಾರೆ. ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಇನ್ನು ಮನೆಯನ್ನು ತೊರೆದಿರುವ ಪಾಲಕರ ಕುಟುಂಬಗಳಲ್ಲಿ ಮಕ್ಕಳಿಗೆ ಒಂಟಿತನ ಕಾಡುತ್ತಿದೆ.

ಮರು ಮತದಾನದ ಬಗ್ಗೆ ಮೆಂದಾರೆ ಹಾಗೂ ಇಂಡಿಗನತ್ತ ಗ್ರಾಮದಲ್ಲಿ ಟಾಂಟಾಂ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಮತಗಟ್ಟೆ, ಚೆಕ್‌ಪೋಸ್ಟ್ ಹಾಗೂ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಹೆಚ್ಚಿನ ನಿಗಾ ವಹಿಸುವುದರ ಜತೆಗೆ ಕಟ್ಟೆಚ್ಚರ ವಹಿಸಲಾಗಿತ್ತು. ಬೆಳಗ್ಗೆ 10.30ರೊಳಗೆ ಮೆಂದಾರೆ ಗ್ರಾಮದ ಬಹುತೇಕ ಗಿರಿಜನ ಭಯದ ನಡುವೆಯೂ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಆದರೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಘಟನೆಯಲ್ಲಿ ಭಾಗಿಯಾಗದೆ ಮನೆಯಲ್ಲಿಯೇ ಉಳಿದಿದ್ದ ಕೆಲವರು ಮಾತ್ರ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಕೆಲ ಮಹಿಳೆಯರು ಬಂಧನ ಭೀತಿಯಿಂದ ಮನೆಯಲ್ಲೇ ಉಳಿದರು.

ನಿಟ್ಟುಸಿರು ಬಿಟ್ಟ ಅಧಿಕಾರಿಗಳು: ಮರು ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದರು. ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ, ಎಎಸ್ಪಿ ಉದೇಶ್, ಡಿವೈಎಸ್ಪಿ ಧಮೇಂದ್ರ, ಇನ್ಸ್‌ಪೆಕ್ಟರ್ ಜಗದೀಶ್, ಮನೋಜ್‌ಕುಮಾರ್ ಸೇರಿದಂತೆ ಸುಮಾರು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದರು. ಹಾಗಾಗಿ ಮರು ಮತದಾನವು ಶಾಂತಿಯುತವಾಗಿ ನಡೆಯಿತು. ಇದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net